ನವದೆಹಲಿ:ಶ್ರಮಿಕ್ ವಿಶೇಷ ರೈಲುಗಳಿಗೆ ಸಂಬಂಧಿಸಿದಂತೆ ವಲಸೆ ಕಾರ್ಮಿಕರಿಗಾಗಿ ನ್ಯಾಯ ಸಮ್ಮತವಾಗಿ ಕೇಂದ್ರೀಯ ರೈಲ್ವೆ ಸಚಿವ ಪಿಯೂಷ್ ಗೋಯಲ್ ಕಾರ್ಯನಿರ್ವಹಿಸಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್, ಗೋಯಲ್ ರಾಜೀನಾಮೆಗೆ ಆಗ್ರಹಿಸಿದೆ.
ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವರು ವಲಸೆ ಕಾರ್ಮಿಕರಿಗಾಗಿ ವ್ಯವಸ್ಥೆ ಮಾಡಿದ ಶ್ರಮಿಕ್ ರೈಲಿನ ಕಾರ್ಯ ವೈಖರಿಗಳಲ್ಲಿ ಸ್ಪಷ್ಟತೆ ಇಲ್ಲ ಹಾಗೂ ರೈಲು ಪ್ರಯಾಣಕ್ಕೆ ಸಂಬಂಧಿಸಿದಂತೆ ವಲಸೆ ಕಾರ್ಮಿಕರೊಂದಿಗೆ ನ್ಯಾಯಯುತವಾಗಿ ರೈಲ್ವೆ ಸಚಿವರು ವರ್ತಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಶ್ರಮಿಕ್ ವಿಶೇಷ ರೈಲುಗಳ ವೆಚ್ಚದಲ್ಲಿ ರಾಜ್ಯ ಸರ್ಕಾರಕ್ಕೆ ಶೇ.85 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ ಎಂಬ ಬಗ್ಗೆ ರೈಲ್ವೆ ಸಚಿವರ ಹೇಳಿಕೆಯನ್ನು ಪ್ರಶ್ನಿಸಿದ ಸಿಂಘ್ವಿ, ಈ ವಿಷಯದ ಬಗ್ಗೆ ಸ್ಪಷ್ಟ ಸಾಕ್ಷಿ ನೀಡಲಿ ಎಂದು ಸಚಿವಾಲಯವನ್ನು ಕೇಳಿದ್ದಾರೆ.
ವಲಸಿಗರ ಪರವಾಗಿ ನಾವು ಸರ್ಕಾರವನ್ನು ಕೇಳಬೇಕಾದ ಅತ್ಯಂತ ಗಂಭೀರವಾದ ಅಂಶ ಇದಾಗಿದೆ. ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು ಇಲ್ಲವಾದರೆ ಪಕ್ಷವೇ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು, ಇವೆರಡರಲ್ಲಿ ಒಂದು ಆಗಲೇಬೇಕು ಎಂದು ಸಿಂಘ್ವಿ ಹೇಳಿದ್ದಾರೆ.
ಕೆಲವು ವಲಸಿಗರು ತಮ್ಮ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ್ದರೂ ಸಹ ರೈಲ್ವೆ ಇಲಾಖೆಯ ಬೇಜವಾಬ್ದಾರಿತನದಿಂದ ನಮಗೆ ರೈಲು ಸಿಗದಂತಾಗಿದೆ ಎಂದು ಕೋಪಿಸಿಕೊಂಡು ಎಷ್ಟೋ ರಾಜ್ಯಗಳಿಂದ ನಡೆದುಕೊಂಡು ತಮ್ಮ ತವರಿಗೆ ಸೇರಲು ತೀರ್ಮಾನಿಸಿದ್ದಾರೆ ಎಂದು ಸಿಂಘ್ವಿ ಕಿಡಿಕಾರಿದರು.
ಕೇಂದ್ರ ಸರ್ಕಾರ ರಾಷ್ಟ್ರ ವ್ಯಾಪಿ ಲಾಕ್‌ಡೌನ್ ಘೋಷಿಸಿದ ನಂತರ, ಏಪ್ರಿಲ್ ಅಂತ್ಯದಲ್ಲಿ ಶ್ರಮಿಕ್ ರೈಲುಗಳನ್ನು ಪ್ರಾರಂಭಿಸಲಾಯಿತು. ಆದರೆ ಇಂದಿನವರೆಗೂ ಈ ರೈಲುಗಳ ಸ್ಥಿರ ಮಾರ್ಗಗಳ ಬಗ್ಗೆ ಜನರಿಗೆ ತಿಳಿದೇ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಇನ್ನು ಈ ರೈಲು ಪ್ರಯಾಣದ ವೇಳೆ ಹಲವಾರು ಸಾವುಗಳು ಮತ್ತು ರೈಲಿನ ವಿಳಂಬಗಳ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದ್ದು, ರೈಲ್ವೆ ಇಲಾಖೆ ನೀಡಿರುವ ಸಾವಿನ ಅಂಕಿ ಅಂಶಗಳು ಸುಳ್ಳಾಗಿರಬಹುದು, ಇಲಾಖೆ ಕೊಟ್ಟಿರುವುದಕ್ಕಿಂತ ಹೆಚ್ಚು ಸಾವು ಸಂಭವಿಸಿರಬಹುದು ಎಂದು ಆರೋಪಿಸಿದೆ.