ಶ್ರೀನಗರ : 2020ರ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿರುವ ಜಮ್ಮು ಮತ್ತು ಕಾಶ್ಮೀರದ ಮೂವರು ಫೋಟೊ ಜರ್ನಲಿಸ್ಟ್‌ಗಳಿಗೆ ಅಭಿನಂದನಾ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ.
ಅಸೋಸಿಯೇಟೆಡ್ ಪ್ರೆಸ್ (ಎಪಿ) ಯೊಂದಿಗೆ ಕೆಲಸ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರದ ಮೂವರು ಫೋಟೋ ಜರ್ನಲಿಸ್ಟ್‌ಗಳಾದ ಮುಖ್ತಾರ್ ಖಾನ್, ಯಾಸಿನ್ ದಾರ್ ಮತ್ತು ಚನ್ನಿ ಆನಂದ್ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಆರ್ಟಿಕಲ್ 370 ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ಪ್ರದೇಶವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು, ಆ ಸಮಯದಲ್ಲಿ ಅವರು ತೆಗೆದಿದ್ದ ಛಾಯಾಚಿತ್ರಗಳು ಅವರಿಗೆ ಪುಲಿಟ್ಜರ್ ಪ್ರಶಸ್ತಿ ತಂದು ಕೊಡಿಸುವಲ್ಲಿ ಯಶಸ್ವಿಯಾಗಿವೆ.
ಆ ಮೂಲಕ ಈ ಮೂವರು ಭಾರತೀಯ ಫೋಟೋ ಜರ್ನಲಿಸ್ಟ್ಗಳು ಪತ್ರಿಕೋದ್ಯಮದ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು, ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
"ಕಾಶ್ಮೀರದ ಪತ್ರಕರ್ತರಿಗೆ ಈ ವರ್ಷ ಅತ್ಯಂತ ಕಠಿಣವಾದ ವರ್ಷವಾಗಿದೆ ಮತ್ತು ಅದರಲ್ಲೂ ಕಳೆದ 30 ವರ್ಷಗಳನ್ನು ಪರಿಗಣಿಸಿ ನಿಖರವಾಗಿ ಏನನ್ನಾದರೂ ಹೇಳುವುದು ಅಷ್ಟು ಸುಲಭವಲ್ಲ. ಅದೇನೇ ಇರಲಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಮುಖ್ತಾರ್ ಖಾನ್, ಯಾಸಿನ್ ದಾರ್ ಮತ್ತು ಚನ್ನಿ ಆನಂದ್ ಅವರಿಗೆ ನನ್ನ ಅಭಿನಂದನೆಗಳು. ಈ ಪ್ರತಿಷ್ಠಿತ ಪ್ರಶಸ್ತಿ ನಿಮ್ಮ ಕ್ಯಾಮೆರಾಗಳಿಗೆ ಹೆಚ್ಚಿನ ಶಕ್ತಿ ನೀಡಲಿ," ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
"ಕಾಶ್ಮೀರದಲ್ಲಿ ಮಾನವೀಯ ಬಿಕ್ಕಟ್ಟನ್ನು ಸೆರೆಹಿಡಿದ ನಿಮ್ಮ ಛಾಯಾಗ್ರಹಣಕ್ಕಾಗಿ ಅಭಿನಂದನೆಗಳು 370ನೇ ವಿಧಿಯನ್ನು ಅಕ್ರಮವಾಗಿ ರದ್ದುಪಡಿಸಿದವು. ನಮ್ಮ ಪತ್ರಕರ್ತರು ವಿದೇಶದಲ್ಲಿ ಮೆಚ್ಚುಗೆಯನ್ನು ಗಳಿಸುತ್ತಾರೆ ಆದರೆ ನಾವಿಲ್ಲಿ ಕಠಿಣ ಕಾನೂನುಗಳ ಅಡಿಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದೇವೆ" ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ಟಿಜಾ ಮುಫ್ತಿ ತಮ್ಮ ತಾಯಿಯ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.