ನವದೆಹಲಿ: ದೇಶದಲ್ಲಿ ಮೇ.3ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶ ಹೊರಹಾಕಿದ್ದು, ಅವರ ನಿರ್ಧಾರ ಸ್ವಾಗತಿಸಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಕಟುವಾಗಿ ಟೀಕೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಭಾಷಣದ ಕುರಿತು ಟ್ವೀಟ್ ಮಾಡಿರುವ ಚಿದು, ನಾವು ಕೂಡ ಪ್ರಧಾನಿಯವರಿಗೆ ಹೊಸ ವರ್ಷದ ಶುಭಾಶಯ ತಿಳಿಸುತ್ತೇವೆ. ದೇಶದಲ್ಲಿ ಲಾಕ್ಡೌನ್ ವಿಸ್ತರಣೆಯ ಅನಿವಾರ್ಯತೆ ನಮಗೆ ಅರ್ಥವಾಗುತ್ತದೆ. ಪ್ರಧಾನಿಯವರ ಈ ನಿರ್ಧಾರಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದಿದ್ದಾರೆ. ಆದರೆ ಹಣಕಾಸಿಗಾಗಿ ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಮಾಡಿಕೊಂಡಿರುವ ಮನವಿಗೆ ಭಾಷಣದಲ್ಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.
ದೇಶದ ಬಡವರು 21+19 ದಿನಗಳ ಕಾಲ ತಮ್ಮ ಅಗತ್ಯಗಳನ್ನು ತಾವೇ ಪೂರೈಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಕೇಂದ್ರ ಸರ್ಕಾರ ಹಣ ಅಥವಾ ಆ ಹಾರ ಬಿಡುಗಡೆ ಮಾಡ್ತಿಲ್ಲ. 'ಅಳು, ನನ್ನ ಪ್ರೀತಿಯ ದೇಶವೇ' ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಚಿದಂಬರಂ ದೇಶದಲ್ಲಿನ ಬಡವರು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಅವರ ಪರವಾಗಿ ಕೇಂದ್ರ ಕೆಲಸ ಮಾಡಬೇಕು ಎಂದು ಹೇಳಿದ್ದರು.
21 ನಿಮಿಷಗಳ ಕಾಲ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಬಡವರಿಗಾಗಿ ಯಾವುದೇ ರೀತಿಯ ಪ್ಯಾಕೇಜ್ ಘೋಷಣೆ ಮಾಡದಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ದೇಶದ ಆರ್ಥಿಕತೆ ವೃದ್ಧಿಗಾಗಿ ಈ ಭಾಷಣದಲ್ಲಿ ಯಾವುದೇ ಮಾಹಿತಿ ಹೊರಹಾಕಿಲ್ಲ ಎಂದು ಅಭಿಷೇಕ್ ಮನು ಸಿಂಘ್ವಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.