ನವದೆಹಲಿ: ಮಧ್ಯಪ್ರದೇಶದ ಯುವ ನಾಯಕ ಎಂದೇ ಹೆಸರು ವಾಸಿಯಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ನಿನ್ನೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಒಂದು ರೀತಿಯ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು. ಈ ಹಿನ್ನೆಲೆ ಕೆಲವು ಕಾಂಗ್ರೆಸ್ ನಾಯಕರುಗಳು ಸಿಂಧಿಯಾ ರಾಜೀನಾಮೆ ವಿಚಾರವಾಗಿ ಬೇಸರ ವ್ಯಕ್ತಪಡಿಸಿದರೆ, ಇನ್ನುಳಿದ ನಾಯಕರು ಸಿಂದಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವೈಯಕ್ತಿಕ ಆಕಾಂಕ್ಷೆಗಳಿಗೋಸ್ಕರ ತತ್ವ ಸಿದ್ದಾಂತಗಳನ್ನೇ ಮರೆತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಯುವ ಮುಖಂಡರಾಗಿದ್ದ ಸಿಂದಿಯಾ, ಪಕ್ಷದಲ್ಲಿ ತಮ್ಮ ಮಾತಿಗೆ ಬೆಲೆ ದೊರೆಯುತ್ತಿಲ್ಲ ಹಾಗೂ ನಮ್ಮವರನ್ನು ಕಡೆಗಣಿಸಲಾಗುತ್ತಿದೆ ಎಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, 15 ತಿಂಗಳಿನಿಂದ ಕಾರ್ಯನಿರತವಾಗಿದ್ದ ಕಮಲನಾಥ್ ನೇತೃತ್ವದ ಸರ್ಕಾರಕ್ಕೆ ತಿಲಾಂಜಲಿ ಬಿಡುವ ಸಮಯ ಸಮೀಪಿಸಿದೆ ಎಂಬುದು ರಾಜಕೀಯ ಬಣದ ಅಭಿಪ್ರಾಯವಾಗಿದೆ.
ಇನ್ನು ಸಿಂಧಿಯಾ ರಾಜಿನಾಮೆ ನೀಡುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ನಾಯಕರ, ಟೀಕೆ, ಆಕ್ರೋಶಗಳ ಕಟ್ಟೆ ಒಡೆದಿದ್ದು, 1857 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧದ ದಂಗೆ ಮತ್ತು ಆಗಿನ ಸಿಂಧಿಯಾ ರಾಜ ಮನೆತನದ ಪಾತ್ರವನ್ನು ನೆನಪಿಸಿದ್ದು, 1967 ರಲ್ಲಿ ವಿಜಯ್ ರಾಜೆ ಸಿಂದಿಯಾ ಅವರು ಕಾಂಗ್ರೆಸ್ ಪಕ್ಷದಿಂದ ಬದಲಾವಣೆಗೊಂಡ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಪ್ರಸ್ತುತವಾಗಿ ರಾಜಸ್ಥಾನದಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಉಪಮುಖ್ಯಂತ್ರಿ ಸಚಿನ್ ಪೈಲಟ್ ನಡುವೆ ಶೀತಲ ಸಮರ ಉಂಟಾಗಿದೆ ಎಂಬ ಊಹಾಪೋಹಗಳು ಹಬ್ಬಿದ್ದು, ಮಧ್ಯಪ್ರದೇಶದ ಸ್ಥಿತಿ ಮುಂದೆ ರಾಜಸ್ಥಾನಕ್ಕೂ ಬಂದೊದಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಹಿನ್ನೆಲೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್, ಸಿಂಧಿಯಾ ವಿರುದ್ಧ ಹರಿಹಾಯ್ದಿದ್ದಾರೆ. ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸುವುದು ನಾಯಕನ ಸ್ವಯಂ-ಭೋಗದ ರಾಜಕೀಯ ಮಹತ್ವಾಕಾಂಕ್ಷೆಗಳ ಬಗ್ಗೆ ಹೇಳುತ್ತದೆ, ವಿಶೇಷವಾಗಿ ಬಿಜೆಪಿ ಆರ್ಥಿಕತೆ, ಪ್ರಜಾಪ್ರಭುತ್ವ ಸಂಸ್ಥೆಗಳು, ಸಾಮಾಜಿಕ ಮತ್ತು ನ್ಯಾಯಾಂಗವನ್ನು ಹಾಳು ಮಾಡುತ್ತಿರುವಾಗ, ಮಾತೃ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವುದು ಪ್ರಜಾಪ್ರಭುತ್ವ ಹಾಗೂ ಜನತಂತ್ರಕ್ಕೆ ಮಾಡಿದ ಮಹಾಮೋಸ ಎಂದು ಕಿಡಿಕಾರಿದ್ದಾರೆ.
ಇನ್ನು ಕಾಂಗ್ರೆಸ್ ಲೋಕಸಭಾ ಸದಸ್ಯ ಅದಿರಂಜನ್ ಚೌಧರಿ ಕೂಡ ಸಿಂಧಿಯಾ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, ಪಕ್ಷ, ರಾಜಕೀಯ ಇವೆಲ್ಲವುದಕ್ಕಿಂತ ಸಿಂದಿಯಾಗೆ ವೈಯಕ್ತಿಯ ಮಹತ್ವಾಕಾಂಕ್ಷೆಗಳೇ ಹೆಚ್ಚಾದವು. ವೈಯಕ್ತಿಕ ಹಿತಾಸಕ್ತಿಯಿಂದಾಗಿ ಪ್ರಜಾಪ್ರಭುತ್ವಕ್ಕೆ ಮಾರಕವಾಗವಂತಹ ಕೃತ್ಯ ಎಸಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.