ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಚೀನಿಯರೊಂದಿಗೆ ಘರ್ಷಣೆ ನಡೆದ ಸಂದರ್ಭದಲ್ಲಿ ಭಾರತೀಯ ಸೈನಿಕರು ನಿರಾಯುಧರಾಗಿದ್ದರೇ ಎಂದು ಪ್ರಶ್ನಿಸಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಕಾಂಗ್ರೆಸ್ ಟೀಕಿಸಿದೆ.
"ನಮ್ಮ ಸೈನಿಕರ ಮೇಲೆ ಹಲ್ಲೆ ನಡೆದರೆ ಆತ್ಮರಕ್ಷಣೆಗಾಗಿ ಅವರಲ್ಲಿ ಆಯುಧಗಳು ಇರಲೇಬೇಕು. ಸೈನಿಕರಿಗೆ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ನೀಡುವುದನ್ನು ತಡೆಯಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟ್ವೀಟ್ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿನ್ನೆ ವಿಡಿಯೋವೊಂದನ್ನು ಟ್ವೀಟ್ ಮಾಡಿ, "ಸೋಮವಾರ ರಾತ್ರಿ ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ಘರ್ಷಣೆಯಾದ ಸಂದರ್ಭದಲ್ಲಿ ಭಾರತೀಯ ಸೈನಿಕರು ಏಕೆ ನಿರಾಯುಧರಾಗಿದ್ದರು" ಎಂದು ಕೇಳಿದ್ದರು.
ಈ ವಿಷಯದ ಬಗ್ಗೆ ಟ್ವಿಟ್ಟರ್ನಲ್ಲಿ ರಾಹುಲ್ ಗಾಂಧಿಯನ್ನು ಖಂಡಿಸಿದ ವಿದೇಶಾಂಗ ಸಚಿವ ಎಸ್.ಜೈಶಂಕರ್, "ನಾವು ಸತ್ಯಗಳನ್ನು ನೇರವಾಗಿ ತಿಳಿದುಕೊಳ್ಳೋಣ. ಗಡಿ ಕರ್ತವ್ಯದಲ್ಲಿರುವ ಎಲ್ಲಾ ಸೈನಿಕರು ಯಾವಾಗಲೂ ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಾರೆ. ಜೂನ್ 15ರಂದು ಗಾಲ್ವಾನ್‌ನಲ್ಲಿರುವವರು ಹಾಗೆ ಮಾಡಿದ್ದರು" ಎಂದು ಉತ್ತರ ಕೊಟ್ಟಿದ್ದರು.