ಕೇರಳ:ಶಾಲಾ ಮಕ್ಕಳು ಇಳಿಯಬೇಕಾದ ನಿಲ್ದಾಣದಲ್ಲಿ ನಿಲ್ಲಿಸದ ಖಾಸಗಿ ಬಸ್ ಕಂಡಕ್ಟರ್‌ಗೆ ಕೇರಳದ ಮಲಪ್ಪುರಂ ಜಿಲ್ಲಾಧಿಕಾರಿ ಜಾಫರ್ ಮಲ್ಲಿಕ್ ಅವರು ವಿಭಿನ್ನ ರೀತಿಯ ಶಿಕ್ಷೆ ನೀಡಿದ್ದಾರೆ.
ಮಕ್ಕಳೊಂದಿಗೆ ಅಮಾನವೀಯವಾಗಿ ವರ್ತಿಸಿದ ಕಂಡಕ್ಟರ್‌ಗೆ ವಿದ್ಯಾರ್ಥಿಗಳ ಮನೆಯಲ್ಲಿಯೇ 10 ದಿನ ಕೆಲಸ ಮಾಡುವಂತೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ವಾಜಿಕಾಡವು-ಪರಪನಂಗಡಿ ಮಾರ್ಗದ ಖಾಸಗಿ ಬಸ್ ‘ಕೊರಂಬಾಯಿಲ್’ನ ಕಂಡಕ್ಟರ್ ಶಬೀರ್ ಅಲಿ, ತನ್ನ ಸಹೋದರನೊಂದಿಗೆ ವೆಂಗರಾ ಬಳಿ ಇಳಿಯಲು ಬಯಸಿದ ವಿದ್ಯಾರ್ಥಿ ಪ್ರಯಾಣಿಕರನ್ನು ಕಡೆಗಣಿಸಿದ್ದರು. ಮಕ್ಕಳಿಗಾಗಿ ಬಸ್ ನಿಲ್ಲಿಸುವಂತೆ ಕೇಳಿದ ಇತರ ಪ್ರಯಾಣಿಕರ ಬೇಡಿಕೆಗಳಿಗೆ ಗಮನ ಕೊಟ್ಟಿರಲಿಲ್ಲ.
ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಮೋಟಾರು ವಾಹನ ಇಲಾಖೆಯು (ಎಂವಿಡಿ) ಬಸ್ ಅನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಇನ್ಮುಂದೆ ಬಸ್‌ನಲ್ಲಿ ಪ್ರಯಾಣಿಸುವ ಮಕ್ಕಳು ಮತ್ತು ಹಿರಿಯರಿಗೆ ಉತ್ತಮವಾಗಿ ವರ್ತಿಸಲಿ ಎಂಬ ಉದ್ದೇಶದಿಂದ ಶಿಕ್ಷೆ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಘಟನೆ ಕುರಿತು ಜಿಲ್ಲಾಧಿಕಾರಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಿಲ್ಲೆಯ ತವನೂರ್ ಮಕ್ಕಳ ಮನೆಯಲ್ಲಿ ಕಂಡಕ್ಟರ್ ಆಗಿ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಕಂಡಕ್ಟರ್ 10 ದಿನ ಕೆಲಸ ಮಾಡಲಿದ್ದಾರೆ. ಜುಲೈ 25ರಿಂದ ಮಕ್ಕಳ ಮನೆಯಲ್ಲಿರುವ ಪೋಷಕರು ಆದೇಶಿಸುವ ಕೆಲಸಗಳನ್ನು ಪಾಲಿಸಬೇಕು. ಈ ಶಿಕ್ಷೆಯಿಂದ ಕಂಡಕ್ಟರ್ ಬದಲಾಗಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಪೋಸ್ಟ್ ಮಾಡಿದ್ದಾರೆ.