ನವದೆಹಲಿ: ಆಗಸ್ಟ್ 5ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾನ ಗಂಧರ್ವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ (74) ಇಂದು ಕೊನೆಯುಸಿರೆಳೆದಿದ್ದಾರೆ. ಎಸ್ಪಿಬಿ ನಿಧನಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಂಬನಿ ಮಿಡಿದಿದ್ದಾರೆ.
ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, "ಸಂಗೀತ ಮಾಂತ್ರಿಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಅಗಲಿಯಿಂದಾಗಿ ಭಾರತೀಯ ಸಂಗೀತ ಕ್ಷೇತ್ರ ಅದ್ಭುತವಾದ ದನಿಯನ್ನು ಕಳೆದುಕೊಂಡಿದೆ. ಅಸಂಖ್ಯಾತ ಅಭಿಮಾನಿಗಳಿಂದ 'ಪಾಡುಂ ನಿಲಾ' ಅಥವಾ 'ಸಿಂಗಿಂಗ್ ಮೂನ್' ಎಂದು ಕರೆಯಲ್ಪಡುವ ಅವರನ್ನು ಪದ್ಮಭೂಷಣ ಸೇರಿದಂತೆ ಅನೇಕ ರಾಷ್ಟ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ" ಎಂದಿದ್ದಾರೆ.
"ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಭಾರತದಾದ್ಯಂತ ಪ್ರತಿ ಮನೆಮನೆಯಲ್ಲೂ ಅವರ ಹೆಸರು ಅಜರಾಮರವಾಗಿದ್ದು, ಅವರ ಸುಮಧುರ ಕಂಠ ಮತ್ತು ಸಂಗೀತ ದಶಕಗಳಿಂದ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಅವರ ಅಗಲಿಕೆ ಅತೀವ ದುಃಖವನ್ನುಂಟು ಮಾಡಿದೆ" ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
"ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡು ನೋವಿನಲ್ಲಿರುವ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಾಂತ್ವನ ತಿಳಿಸುತ್ತೇನೆ. ಅನೇಕ ಭಾಷೆಗಳಲ್ಲಿನ ಎಸ್ಪಿಪಿ ಅವರ ಹಾಡುಗಳು ಲಕ್ಷಾಂತರ ಹೃದಯಗಳನ್ನು ಮುಟ್ಟಿವೆ. ಅವರ ಧ್ವನಿ ಅಮರವಾಗಿದೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
"ಖ್ಯಾತ ಸಂಗೀತಗಾರ ಮತ್ತು ಹಿನ್ನೆಲೆ ಗಾಯಕ ಪದ್ಮಭೂಷಣ ಎಸ್. ಪಿ. ಬಾಲಸುಬ್ರಹ್ಮಣ್ಯಂ ಜೀ ಅವರ ನಿಧನದಿಂದ ಬಹಳ ದುಃಖವಾಗಿದೆ. ಅವರ ಸುಮಧುರ ಧ್ವನಿ ಮತ್ತು ಸಾಟಿಯಿಲ್ಲದ ಸಂಗೀತ ಸಂಯೋಜನೆಗಳ ಮೂಲಕ ಅವರು ನಮ್ಮ ನೆನಪುಗಳಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಾಂತ್ವನ ಹೇಳುತ್ತಿದ್ದೇನೆ" ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.