ನವದೆಹಲಿ:ತಮ್ಮ ತಂದೆಯ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ನಿಜ. ಆದ್ರೆ, ಸಂಪೂರ್ಣವಾಗಿ ಹದಗೆಟ್ಟಿಲ್ಲ ಎಂದು ಪುತ್ರಿ ಶರ್ಮಿಸ್ತಾ ಮುಖರ್ಜಿ ಇಂದು ಬೆಳಗ್ಗೆ ತಿಳಿಸಿದ್ದಾರೆ.
ಮಾಜಿ ರಾಷ್ಟ್ರಪತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾದ ದಿನಕ್ಕೆ ಹೋಲಿಸಿದರೆ ಇಂದು ಅವರು ಕಣ್ಣುಗಳನ್ನು ಬಿಟ್ಟು ಪ್ರತಿಕ್ರಿಯಿಸುತ್ತಿದ್ದಾರೆ. ಇದರಿಂದಾಗಿ ನನ್ನ ತಂದೆಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಖಂಡಿದೆ ಎಂದು ಶರ್ಮಿಸ್ತಾ ಹೇಳಿದ್ದಾರೆ.
ಕಳೆದೆರಡು ದಿನಗಳಿಂದ ನಾನು ತಿಳಿದಿರುವ ಸಂಗತಿಯೆಂದರೆ, ನನ್ನ ತಂದೆಯ ಸ್ಥಿತಿ ತುಂಬಾ ಗಂಭೀರವಾಗಿದ್ದರೂ ಸಹ ಅದು ಸಂಪೂರ್ಣವಾಗಿ ಹದಗೆಟ್ಟಿಲ್ಲ. ಕಣ್ಣು ಬಿಡಲಾರದ ಸ್ಥಿತಿಯಲ್ಲಿದ್ದವರು, ಇಂದು ಬೆಳಕಿನ ಕಿರಣಕ್ಕೆ ಅವರ ಕಣ್ಣುಗಳು ಪ್ರತಿಕ್ರಿಯಿಸಿವೆ. ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ತಂದೆಯ ಆರೋಗ್ಯಕ್ಕಾಗಿ ನಿಮ್ಮ ಪ್ರಾರ್ಥನೆಯನ್ನು ಮುಂದುವರಿಸಲು ವಿನಂತಿಸುತ್ತೇನೆ. ದೇವರು ನಮ್ಮೆಲ್ಲರನ್ನೂ ಆಶೀರ್ವದಿಸಲಿ ಎಂದು ಅವರು ಬರೆದುಕೊಂಡಿದ್ದಾರೆ.