ಮುಂಬೈ:'ಸಾಮಾನ್ಯ ಕನಿಷ್ಠ ಕಾರ್ಯಕ್ರಮ' (CMP-Common Minimum Programme), ಇದು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟವಾದ ‘ಮಹಾ ವಿಕಾಸ ಅಘಾಡಿ’ ಸರ್ಕಾರ ಬಿಡುಗಡೆ ಮಾಡಿರುವ ಮಹತ್ತರ ಕಾರ್ಯಕ್ರಮ.
ಅತ್ತ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಇತ್ತ ‘ಮಹಾ ವಿಕಾಸ ಅಘಾಡಿ’ ನಾಯಕರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನ ಘೋಷಣೆ ಮಾಡಿದ್ದಾರೆ. ಶಿವಸೇನೆ ನಾಯಕ ಶಿಂಧೆ, ಎನ್‌ಸಿಪಿ ನಾಯಕರಾದ ನವಾಬ್ ಮಲಿಕ್ ಮತ್ತು ಜಯಂತ್ ಪಾಟೀಲ್ ಮುಂದಿನ ಐದು ವರ್ಷಗಳ ಸರ್ಕಾರದ ಯೋಜನೆಗಳನ್ನು ವಿವರಿಸಿದರು.
ಮುಖ್ಯವಾಗಿ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು, ಜಾತ್ಯಾತೀತತೆ ಹಾಗೂ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ ಮೈತ್ರಿ ನಾಯಕರು, ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದ ಸಾಮಾನ್ಯ ಜನರಿಗೆ 10 ರೂ.ಗೆ ಆಹಾರವನ್ನು ಒದಗಿಸುವುದಾಗಿ ಮತ್ತು ಎಲ್ಲಾ ರೋಗಿಗಳಿಗೆ ಅನುಕೂಲವಾಗುವಂತೆ 'ತಾಲೂಕು' ಮಟ್ಟದಲ್ಲಿ 'ಒಂದು ರೂಪಾಯಿ ಕ್ಲಿನಿಕ್' ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ. ನಿರುದ್ಯೋಗ, ಆರೋಗ್ಯ, ಸಾಮಾಜಿಕ ನ್ಯಾಯ, ಶಿಕ್ಷಣ, ನಗರಾಭಿವೃದ್ಧಿ, ಪ್ರವಾಸೋದ್ಯಮ ಸಂಬಂಧಿಸಿದ ಸಮಸ್ಯೆಗಳಿಗೆ ಒತ್ತು ನೀಡುವುದಾಗಿ ತಿಳಿಸಿದ್ದಾರೆ.
‘ಮಹಾ ವಿಕಾಸ ಅಘಾಡಿ’ಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ಈ ಕೆಳಕಂಡಂತಿವೆ:
ಆರೋಗ್ಯ:
- ಸಾಮಾನ್ಯ ಜನರಿಗೆ 10 ರೂ.ಗೆ ಆಹಾರ
- ತಾಲೂಕು ಮಟ್ಟದಲ್ಲಿ 'ಒಂದು ರೂಪಾಯಿ ಕ್ಲಿನಿಕ್' ಆರಂಭ
- ಆಹಾರ ಮತ್ತು ಔಷಧ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ
- ಹಂತಹಂತವಾಗಿ ಎಲ್ಲಾ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಸ್ಥಾಪನೆ
- ರಾಜ್ಯದ ಪ್ರತಿ ನಾಗರಿಕನಿಗೂ ಆರೋಗ್ಯ ವಿಮಾ ಸೌಲಭ್ಯ