ನವದೆಹಲಿ:ಸಾಮಾನ್ಯ ಜನರ ದೀಪಾವಳಿ ಕೇಂದ್ರ ಸರ್ಕಾರದ ಕೈಯಲ್ಲಿದ್ದು ಸುಮಾರು 2 ಕೋಟಿ ರೂಪಾಯಿವರೆಗಿನ ಸಾಲದ ಮೇಲಿನ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ನಿರ್ಧಾರವನ್ನು ಆದಷ್ಟು ಬೇಗ ಜಾರಿಗೊಳಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಸುಮಾರು 8 ವಿಭಾಗಗಳಲ್ಲಿನ ಸಾಲದ ಮೇಲಿನ ಬಡ್ಡಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಈಗಾಗಲೇ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರವನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವುದು ಸರ್ಕಾರದ ಕಡೆಯಿಂದ ನ್ಯಾಯಸಮ್ಮತವಲ್ಲ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ಜೊತೆಗೆ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಆರ್.ಸುಭಾಷ್ ರೆಡ್ಡಿ ಈ ಪೀಠದಲ್ಲಿದ್ದು, ಸರ್ಕಾರ ನಿರ್ಧಾರ ತೆಗೆದುಕೊಂಡ ಮೇಲೆ ವಿಳಂಬವಾಗುತ್ತಿರುವುದೇಕೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಲಾಯಿತು.