ನವದೆಹಲಿ :ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ಹಿನ್ನೆಲೆಯಲ್ಲಿ ರಾಷ್ಟ್ರದ ಅನೇಕ ನಾಯಕರು ಅಂಬೇಡ್ಕರ್ ಅವರನ್ನ ಸ್ಮರಿಸಿದ್ದಾರೆ.
ಪ್ರಧಾನಿ ಮೋದಿ ಕೂಡ ಅಂಬೇಡ್ಕರ್ ಕುರಿತು ಟ್ವೀಟ್ ಮಾಡಿದ್ದು,"ಮಹಾಪರಿನಿರ್ವಾಣ್ ದಿವಾಸ್' ಹಿನ್ನೆಲೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿದ್ದಾರೆ. ಅಂಬೇಡ್ಕರ್ ಅವರ ಆಲೋಚನೆಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತಲೇ ಇರುತ್ತವೆ. ನಮ್ಮ ರಾಷ್ಟ್ರಕ್ಕಾಗಿ ಅವರು ಕಂಡ ಕನಸುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ" ಎಂದು ಮೋದಿ ಬರೆದುಕೊಂಡಿದ್ದಾರೆ.
ಇನ್ನು ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ಯುಪಿ ಮಾಜಿ ಸಿಎಂ ಮಾಯಾವತಿ ಅವರು 'ಸಂವಿಧಾನದ ಶಿಲ್ಪಿ' ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆ ದಿನದಂದು ಅವರ ಕುರಿತು ಟ್ವೀಟ್ ಮಾಡಿದ್ದು, ಅಂಬೇಡ್ಕರ್ ಕೋಟ್ಯಂತರ ಬಡ ಜನರು ಮತ್ತು ನಿರ್ಲಕ್ಷ್ಯಕ್ಕೊಳಗಾದವರಿಗೆ ಹೊಸ ಭರವಸೆ ಮತ್ತು ಸ್ವಾಭಿಮಾನ ಮೂಡಿಸಿದ್ದಾರೆ. ವಿಶೇಷವಾಗಿ ದಲಿತರು ಮತ್ತು ಇತರ ಹಿಂದುಳಿದ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ರಾಷ್ಟ್ರ ನಾಯಕನನ್ನು ನೆನಪಿಸಿಕೊಂಡಿದ್ದಾರೆ.
ಏಪ್ರಿಲ್ 14, 1891ರಂದು ಜನಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು, ಭಾರತೀಯ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಾಮಾಜಿಕ ಸುಧಾರಕರಾಗಿದ್ದರು, ಅವರು ದಲಿತರ ವಿರುದ್ಧದ ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಟ ನಡೆಸಿ ಅವರ ಬದುಕು ಬದಲಿಸಿದರು.
ಮಹಿಳೆಯರು ಮತ್ತು ಕಾರ್ಮಿಕರ ಹಕ್ಕುಗಳನ್ನು ಬೆಂಬಲಿಸಿದರು. 1990 ರಲ್ಲಿ, ಅಂಬೇಡ್ಕರ್‌ಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ್ ರತ್ನವನ್ನು ನೀಡಲಾಯಿತು. ಭಾರತೀಯ ಸಂವಿಧಾನದ ಕರಡು ಸಮಿತಿ ಅಧ್ಯಕ್ಷ ಹಾಗೂ ದಲಿತ ನಾಯಕರಾಗಿದ್ದ ಅಂಬೇಡ್ಕರ್ ಅವರು 1956 ರಲ್ಲಿ ನಿಧನರಾದರು.