ನವದೆಹಲಿ: ಒಂದಾನೊಂದು ಕಾಲದಲ್ಲಿ, ಶಿಕ್ಷಣದ ಪ್ರಾಥಮಿಕ ಉದ್ದೇಶ ಕೇವಲ ಜ್ಞಾನವನ್ನು ಹೊಂದುವುದಷ್ಟೇ ಆಗಿತ್ತು. ಆದರೆ, ಇಂದು ಅದು ಕೆಲಸ ತಂದುಕೊಡುವ ಒಂದು ಸಾಧನವಾಗಿ ಪರಿಣಮಿಸಿದೆ. ಕೆಲಸ ಕೊಡದ ಶಿಕ್ಷಣವನ್ನು ಈಗ ಕೇವಲವಾಗಿ ನೋಡಲಾಗುತ್ತದೆ. ಈ ಕಾರಣಕ್ಕಾಗಿಯೇ, ಉದ್ಯೋಗ ಆಧರಿತ ಕಲಿಕೆಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ ನ್ಯಾಶನಲ್ ಎಜುಕೇಶನ್ ಪಾಲಿಸಿ 2020) ಒತ್ತು ಕೊಟ್ಟಿದೆ.
ಕಳೆದೊಂದು ದಶಕದಲ್ಲಿ ವ್ಯಾಪಾರಿ ವಲಯವು ಅತ್ಯಧಿಕ ಶೇಕಡಾವಾರು ಉದ್ಯೋಗಗಳನ್ನು ಸೃಷ್ಟಿಸಿದೆ. ವಾಸ್ತವವಾಗಿ, ಜಗತ್ತನ್ನು ಆಳುತ್ತಿರುವುದೇ ವ್ಯಾಪಾರ ಕ್ಷೇತ್ರ. ಆನ್‌ಲೈನ್, ಚಿಲ್ಲರೆ, ಡಿಜಿಟಲ್ ಮಾರ್ಕೆಟಿಂಗ್, ಆನ್‌ಲೈನ್ ಅಕೌಂಟಿಂಗ್ (ಟ್ಯಾಲಿ), ತೆರಿಗೆ ಹಾಗೂ ಹಣಕಾಸು ತಂತ್ರಜ್ಞಾನಗಳು ವ್ಯಾಪಾರಿ ವಲಯವನ್ನು ಈಗ ಸಂಪೂರ್ಣವಾಗಿ ಬದಲಿಸಿಬಿಟ್ಟಿವೆ.
ಬಹುತೇಕ ಉದ್ಯೋಗ ಅವಕಾಶಗಳು ಇರುವುದೇ ಮೇಲ್ಕಾಣಿಸಿದ ಈ ಕ್ಷೇತ್ರಗಳಲ್ಲಿ. ಹೆಚ್ಚೆಚ್ಚು ವಿದ್ಯಾರ್ಥಿಗಳು ಈಗ ವಾಣಿಜ್ಯ ಕೋರ್ಸ್‌ಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಶೇಕಡಾ 40 ರಿಂದ 50ರಷ್ಟು ಪದವಿಪೂರ್ವ ವಿದ್ಯಾರ್ಥಿಗಳು ಬಿ.ಕಾಂ ಪದವಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ, ವಿಶೇಷ ವಾಣಿಜ್ಯ ಕಾಲೇಜುಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿದೆ.
ಆದರೆ, ಭಾರತದಲ್ಲಿ ಮಾತ್ರ ಔದ್ಯಮಶೀಲತೆ ಗಳಿಸಲು ಅಥವಾ ಲೆಕ್ಕಶಾಸ್ತ್ರದ ಕೌಶಲ್ಯಗಳನ್ನು ಕಲಿಯಬೇಕೆಂದರೆ ವಿದ್ಯಾರ್ಥಿಗಳು ಹೈಸ್ಕೂಲ್ ಅಥವಾ ಪದವಿಪೂರ್ವ ಹಂತದವರೆಗೆ ಕಾಯಬೇಕಾಗುವ ಪರಿಸ್ಥಿತಿ ಇದೆ. ಪದವಿಪೂರ್ವ ಹಂತದಲ್ಲಿ ಸಿಇಸಿ ಅಧ್ಯಯನ ಮಾಡಿ, ಬಿ.ಕಾಂ. ಮುಗಿಸಿದವರು ಮಾತ್ರ ವಾಣಿಜ್ಯ ವಿಷಯವನ್ನು ಅರ್ಥ ಮಾಡಿಕೊಳ್ಳಬಲ್ಲರು. ಅಂದರೆ, ಉನ್ನತ ವಿದ್ಯಾಭ್ಯಾಸ ಮುಗಿಸುವವರೆಗೆ, ಈ ಕ್ಷೇತ್ರದಲ್ಲಿರುವ ಹಲವಾರು ಅವಕಾಶಗಳನ್ನು ಬಾಚಿಕೊಳ್ಳುವುದು ವಿದ್ಯಾರ್ಥಿಗಳಿಗೆ ಸಾಧ್ಯವಾಗದು ಎಂಬುದು ಇದರ ಅರ್ಥ. ಈ ಪರಿಸ್ಥಿತಿ ಬದಲಾಗಲೇಬೇಕು. ಕಾಲ ಬದಲಾಗುತ್ತಿರುವಾಗ, ಅದಕ್ಕೆ ತಕ್ಕಂತೆ ಪಠ್ಯಕ್ರಮ ಕೂಡಾ ಬದಲಾಗಬೇಕು. ಶಾಲೆಗಳು ತಮ್ಮ ಪಠ್ಯಕ್ರಮದಲ್ಲಿ ವಾಣಿಜ್ಯವನ್ನೂ ಒಂದು ಮೂಲ ವಿಷಯವಾಗಿ ಸೇರಿಸಿಕೊಳ್ಳಬೇಕು.
ಇತ್ತೀಚಿನವರೆಗೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಹೈಸ್ಕೂಲ್ ಹಂತದುದ್ದಕ್ಕೂ 6 ವಿಷಯಗಳನ್ನು ಅಧ್ಯಯನ ಮಾಡುವುದು ಕಡ್ಡಾಯವಾಗಿತ್ತು. ಕೇವಲ ಪದವಿಪೂರ್ವ ಹಂತದಲ್ಲಿ ಮಾತ್ರ, ತಮ್ಮ ಇಚ್ಛೆಯ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಿತ್ತು. ಯಾರು ಎಂಪಿಸಿ ಅಥವಾ ಬಿಐಪಿಸಿ ಕ್ಷೇತ್ರಗಳಿಗೆ ಸೇರ್ಪಡೆಯಾಗುತ್ತಾರೋ ಅಂತಹವರಿಗೆ ಮಾತ್ರ ಪ್ರಸಕ್ತ ಶಾಲಾ ಪಠ್ಯಕ್ರಮವು ಉಪಯುಕ್ತವಾಗಿದೆ.
ವಾಣಿಜ್ಯ ವಿಷಯವು ಪಠ್ಯಕ್ರಮದ ಭಾಗವಾಗಿಲ್ಲದಿರುವುದರಿಂದ, ಸಿಇಸಿ ಆಯ್ಕೆ ಮಾಡುವವರಿಗೆ ನಷ್ಟ ಉಂಟಾಗುತ್ತಿದೆ ಅನಿಸುತ್ತದೆ. 10+2 ಶಾಲಾ ವ್ಯವಸ್ಥೆಯನ್ನು ಕೈಬಿಡಲು ಎನ್‌ಇಪಿ 2020 ನಿರ್ಧರಿಸಿದ್ದು ಈ ಕಾರಣಕ್ಕಾಗಿ.