ನವದೆಹಲಿ:ಗಾಲ್ವಾನ್ ಕಣಿವೆಯಲ್ಲಿ ಭಾರತ- ಚೀನಾ ಸಂಘರ್ಷದ ವಿಚಾರವಾಗಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಅನೇಕ ಹಂತದ ಮಾತುಕತೆಗಳು ವಿಫಲವಾಗಿವೆ. ಕೆಲವೊಂದು ಮಾತುಕತೆಗಳು ಫಲಪ್ರದವಾದಂತೆ ಕಂಡರೂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಭಾರತ-ಚೀನಾ ಮಾತುಕತೆ ನಡೆಯಲಿದೆ.
ಉಭಯ ದೇಶಗಳ ಕಮಾಂಡರ್ಗಳು ಚುಶುಲ್ ಗಡಿಯಲ್ಲಿ ಸಭೆ ನಡೆಸಲಿದ್ದು, ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ)ನಲ್ಲಿ ಸೇನೆಯನ್ನು ಎರಡು ದೇಶಗಳು ತೆರವುಗೊಳಿಸುವ ಬಗ್ಗೆ ಮಾತುಕತೆಗಳು ಮುಂದುವರೆಯಲಿವೆ.
16ನೇ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಹಾಗೂ ದಕ್ಷಿಣ ಜಿಯಾಂಗ್ನ ಮಿಲಿಟರಿ ವಿಭಾಗದ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ನಡುವಿನ ಮೂರನೇ ಮಾತುಕತೆ ಇದಾಗಿದ್ದು, ಕೆಲವೊಂದು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
ಇದಕ್ಕೂ ಮೊದಲು ಜೂನ್ 6 ಹಾಗೂ ಜೂನ್ 22ರಂದು ಚೀನಾ ಭಾಗದ ಮೋಲ್ಡೋ ಎಂಬಲ್ಲಿ ಸಭೆಗಳು ನಡೆದಿದ್ದವು. ಕೊನೆಯ ಸಭೆಯಲ್ಲಿ ಉಭಯ ರಾಷ್ಟ್ರಗಳು ಗಾಲ್ವಾನ್ ಬಳಿಯ ಗಡಿಯಲ್ಲಿ ಪರಸ್ಪರ ಸೇನೆಯನ್ನು ಹಿಂತೆಗೆದುಕೊಳ್ಳಲು ಒಮ್ಮತ ಸೂಚಿಸಿದ್ದವು. ಆದರೂ ಕೂಡಾ ಚೀನಾದಿಂದ ಗಡಿಯಲ್ಲಿ ಸೇನೆ ಜಮಾವಣೆ ನಡೆದಿತ್ತು. ಈಗ ಮಾತುಕತೆಗಳ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ.
ಇಂದು ಭಾರತ -ಚೀನಾ ಸಂಘರ್ಷದ ಬಗ್ಗೆ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎನ್ನಲಾಗಿದ್ದು, ಚೀನಾದ ಮೊಬೈಲ್ ಆಪ್ಲಿಕೇಷನ್ಗಳನ್ನು ಬ್ಯಾನ್ ಮಾಡಿದ ನಂತರ ಅವತರ ಭಾಷಣ ತೀವ್ರ ಕುತೂಹಲ ಮೂಡಿಸಿದೆ.