ನವದೆಹಲಿ:ಕಳೆದ ಕೆಲ ತಿಂಗಳ ಹಿಂದೆ ಭಾರತ-ಚೀನಾ ಗಲ್ವಾನ್ ವ್ಯಾಲಿ ಗಡಿಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಪ್ರಶಸ್ತಿ ನೀಡಲಾಗಿದೆ.
ದೇಶದ ಎರಡನೇ ದೊಡ್ಡ ಶೌರ್ಯ ಪದಕ ಇದಾಗಿದ್ದು, ಗಣರಾಜ್ಯೋತ್ಸವ ಸಮಾರಂಭದ ವೇಳೆ ಈ ಪ್ರಶಸ್ತಿ ನೀಡಲಾಗುತ್ತದೆ. ಮೂಲತ ಬಿಹಾರದವರಾಗಿದ್ದ ಕರ್ನಲ್ ಸಂತೋಷ್ ಬಾಬು ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಸಂಘರ್ಷ ಉಂಟಾಗಿ ಹುತಾತ್ಮರಾಗಿದ್ದರು.
ಹುತಾತ್ಮ ಸಂತೋಷ್ ಬಾಬು ಅವರ ಪತ್ನಿ ಈಗಾಗಲೇ ತೆಲಂಗಾಣದ ಡೆಪ್ಯುಟಿ ಕಲೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಪ್ರತಿ ವರ್ಷ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ಪರಮವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ ಹಾಗೂ ಅಶೋಕ ಚಕ್ರ, ಕೀರ್ತಿ ಚಕ್ರ ಹಾಗೂ ಶೌರ್ಯ ಚಕ್ರ ನೀಡಿ ಗೌರವಿಸುತ್ತಾರೆ.
ಗಲ್ವಾನ್ ವ್ಯಾಲಿ ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡ ಕರ್ನಲ್ ಸಂತೋಷ್ ಬಾಬು, ಸಬ್ ನುದುರಾಮ್ ಸೊರೆನ್, ಹವಾಲ್ದಾರ್ ಕೆ. ಪಳನಿ, ತೇಜಿಂದರ್ ಸಿಂಗ್ ,ದೀಪಕ್ ಸಿಂಗ್, ಗುರ್ತೇಜ್ ಸಿಂಗ್ ಸೇರಿದಂತೆ ಆರು ಸೇನಾ ಸಿಬ್ಬಂದಿಗಳಿಗೆ ಮರಣೋತ್ತರ ವಿವಿಧ ಶೌರ್ಯ ಪದಕ ನೀಡಲಾಗಿದೆ.
ಮೇ 2020ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಮೇಜರ್ ಅನುಜ್ ಸೂದ್ ಅವರಿಗೆ ಮರಣೋತ್ತರ ಶೌರ್ಯ ಚಕ್ರ ಪ್ರಶಸ್ತಿ, 2020ರ ಏಪ್ರಿಲ್ 4ರಂದು ಹುತಾತ್ಮರಾದ ಸುಬೇದಾರ್ ಸಂಜೀವ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ನೀಡಲಾಗಿದೆ.