ಜೈಪುರ್:ಕಳೆದ ಮೂರು ದಿನಗಳ ಹಿಂದೆ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದ ಕರ್ನಲ್ ಆಶುತೋಷ್ ಶರ್ಮಾ ಅವರ ಅಂತ್ಯಕ್ರಿಯೆ ಇಂದು ಸಕಲ ಮಿಲಿಟರಿ ಗೌರವಗಳೊಂದಿಗೆ ಜೈಪುರ್ನಲ್ಲಿ ನಡೆಯಿತು.
ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಕರ್ನಲ್ ಆಶುತೋಷ್ ಅಂತ್ಯಕ್ರಿಯೆ
ಜಮ್ಮುಕಾಶ್ಮೀರದ ಹಂದ್ವಾರದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮರಾದ ಕರ್ನಲ್ ಆಶುತೋಷ್ ಶರ್ಮಾ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಈ ವೇಳೆ ಅವರ ಪತ್ನಿ ಪಲ್ಲವಿ ಶರ್ಮಾ, ಸಹೋದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ದಕ್ಷಿಣ ನೈಋತ್ಯ ಆರ್ಮಿ ಚೀಫ್ ಲೆಫ್ಟಿನೆಂಟ್ ಜನರಲ್ ಅಲ್ಕೋ ಕ್ಲೆರ್ ಈ ವೇಳೆ ಗೌರವ ಸಲ್ಲಿಕೆ ಮಾಡಿದರು. ಕಣ್ಣೀರು ಸುರಿಸುತ್ತಲೇ ಗಂಡನ ಮೃತದೇಹಕ್ಕೆ ಅಂತಿಮ ಗೌರವ ಸಲ್ಲಿಕೆ ಮಾಡಿದ ಪತ್ನಿ ಪಲ್ಲವಿ ಶರ್ಮಾ, ಪತಿಯ ಶೌರ್ಯದ ಬಗ್ಗೆ ತಮಗೆ ಗೌರವವಿದೆ ಎಂದರು.
21ನೇ ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್ ಆಗಿದ್ದ ಶರ್ಮಾ 2000ನೇ ಇಸವಿಯಲ್ಲಿ ಭಾರತೀಯ ಸೇನೆ ಸೇರಿಕೊಂಡಿದ್ದರು. ಜಮ್ಮು-ಕಾಶ್ಮೀರದಲ್ಲೇ ಕಳೆದ ಕೆಲ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅವರು, ಉಗ್ರರ ವಿರುದ್ಧದ ಅನೇಕ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು.