ಕರ್ನಾಟಕ

karnataka

ETV Bharat / bharat

ದೇಶದ ಆರ್ಥಿಕ ಪ್ರಗತಿಗೆ ಕಲ್ಲಿದ್ದಲೇ ಇಂಧನ! - Cole India Limited

ಕೋಲ್ ಇಂಡಿಯಾ ಲಿಮಿಟೆಡ್‌ನ ಏಕಸ್ವಾಮ್ಯ ಮುರಿದು ಖಾಸಗಿ ಕಂಪನಿಗಳಿಗೆ ವಾಣಿಜ್ಯ ಉದ್ದೇಶಗಳಿಗಾಗಿ ಕಲ್ಲಿದ್ದಲು ಗಣಿಗಾರಿಕೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇದು ಕಲ್ಲಿದ್ದಲು ವಲಯದಲ್ಲಿ ಮಹತ್ವದ ಸುಧಾರಣೆಗೆ ಕಾರಣವಾಗಲಿದೆ. ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ಹಾಗೂ ಕಲ್ಲಿದ್ದಲು ಗಣಿಗಳ ಕಾಯ್ದೆ 2015 ಕ್ಕೆ ತಿದ್ದುಪಡಿ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ತುರ್ತು ಸುಗ್ರೀವಾಜ್ಞೆಯನ್ನೂ ಸರ್ಕಾರ ಹೊರಡಿಸಿದೆ.

coal-is-the-fuel-for-the-economic-growth-of-the-country
ದೇಶದ ಆರ್ಥಿಕ ಪ್ರಗತಿಗೆ ಕಲ್ಲಿದ್ದಲೇ ಇಂಧನ.....

By

Published : Jan 14, 2020, 9:58 AM IST

ಕೋಲ್ ಇಂಡಿಯಾ ಲಿಮಿಟೆಡ್‌ನ ಏಕಸ್ವಾಮ್ಯವನ್ನು ಮುರಿದು ಖಾಸಗಿ ಕಂಪನಿಗಳಿಗೆ ವಾಣಿಜ್ಯ ಉದ್ದೇಶಗಳಿಗಾಗಿ ಕಲ್ಲಿದ್ದಲು ಗಣಿಗಾರಿಕೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇದು ಕಲ್ಲಿದ್ದಲು ವಲಯದಲ್ಲಿ ಮಹತ್ವದ ಸುಧಾರಣೆಗೆ ಕಾರಣವಾಗಲಿದೆ. ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ಹಾಗೂ ಕಲ್ಲಿದ್ದಲು ಗಣಿಗಳ ಕಾಯ್ದೆ 2015 ಕ್ಕೆ ತಿದ್ದುಪಡಿ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ತುರ್ತು ಸುಗ್ರೀವಾಜ್ಞೆಯನ್ನೂ ಸರ್ಕಾರ ಹೊರಡಿಸಿದೆ.

2018ರ ಫೆಬ್ರವರಿಯಲ್ಲಿ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ಅದರ ಪರಿಣಾಮ ಕಲ್ಲಿದ್ದಲು ವಲಯದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸಿತ್ತು. ಆದರೆ ಬೆಲೆ ಇಳಿಕೆಯನ್ನು ಮಾಡಿತೇ ಹೊರತು ಮತ್ತೇನನ್ನೂ ಅದು ಮಾಡಲಿಲ್ಲ. ಆದರೆ ನಿಯಂತ್ರಗಳ ಸರಪಳಿಯನ್ನು ಆಗ ಬಿಚ್ಚಿ ಮುಕ್ತಗೊಳಿಸಿರಲಿಲ್ಲ. ಬಿಡ್‌ಗಳಲ್ಲಿ ವಿವಿಧ ಕಂಪನಿಗಳು ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದು ಸರ್ಕಾರ ಬಯಸಿದರೆ ಕಾನೂನುಗಳ ಸರಪಳಿಗಳನ್ನು ಸರ್ಕಾರ ಬಿಚ್ಚಬೇಕಾಗುತ್ತದೆ. ಇಲ್ಲವಾದರೆ, ಶೇಕಡಾ ನೂರರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಸರ್ಕಾರ ಅನುಮತಿಸಬೇಕು. ಈ ಕ್ರಮವನ್ನು ಕಳೆದ ಆಗಸ್ಟ್‌ನಲ್ಲಿ ಕೈಗೊಂಡು ಎಫ್‌ಡಿಐಗೆ ಸರ್ಕಾರ ಅನುಮತಿ ನೀಡಿತ್ತು.

ಈವರೆಗೆ ಕಂಪನಿಗಳು ಭಾರತದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮಾಡಬೇಕು ಎಂದಾದರೆ ದೇಶದೊಳಗಿನ ವಿದ್ಯುತ್‌ ಮತ್ತು ಸ್ಟೀಲ್‌ ಕ್ಷೇತ್ರದ ಕಂಪನಿಗಳು ಸರ್ಕಾರ ಕರೆಯುವ ಟೆಂಡರ್‌ನಲ್ಲಿ ಭಾಗವಹಿಸುವುದೊಂದೇ ಅವಕಾಶವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಲ್ಲಿದ್ದಲು ಗಣಿಗಾರಿಕೆ ಮಾಡಲು ಈಗ ಸರ್ಕಾರ ಕರೆಯುವ ಟೆಂಡರ್‌ಗೆ ಕೇವಲ ದೇಶೀಯ ಕಂಪನಿಗಳು ಮಾತ್ರ ಕಾದು, ಅದರಲ್ಲಿ ಬಿಡ್‌ ಸಲ್ಲಿಸಿ ಬಿಡ್‌ನಲ್ಲಿ ಆಯ್ಕೆಯಾದವರಿಗೆ ಮಾತ್ರ ಅವಕಾಶ ಎಂಬ ಕಠಿಣ ನೀತಿಗೆ ತಿಲಾಂಜಲಿ ನೀಡಲಾಗಿದೆ. ಬದಲಿಗೆ ಇದರಲ್ಲಿ ವಿದೇಶದ ಕಂಪನಿಗಳೂ ಭಾಗವಹಿಸಬಹುದು.

ಈ ತಿದ್ದುಪಡಿಯಿಂದಾಗಿ ಪ್ರಮುಖ ಅಂತಾರಾಷ್ಟ್ರೀಯ ಕಂಪನಿಗಳಾದ ಪೀಬಾಡಿ, ಗ್ಲೆನ್‌ಕೋರ್‌ ಮತ್ತು ರಿಯೋ ಟಿಂಟೋ ರೀತಿಯ ಕಂಪನಿಗಳು ಭಾರತದಲ್ಲಿ ಗಣಿಗಾರಿಕೆ ಮಾಡಬಹುದಾಗಿದ್ದು, ಇದನ್ನು ಈವರೆಗೆ ತಡೆಯುತ್ತಿದ್ದ ನೀತಿಯನ್ನು ಸುಗ್ರೀವಾಜ್ಞೆಯ ಮೂಲಕ ನಿವಾರಿಸಲಾಗಿದೆ. ಕೆಲವು ಉದ್ಯಮಗಳಿಗೆ ಕಲ್ಲಿದ್ದಲು ಪೂರೈಕೆ ಅತ್ಯಂತ ಅಗತ್ಯದ್ದಾಗಿದ್ದು, ಅವುಗಳಿಗೆ ನಿರಂತರ ಕಲ್ಲಿದ್ದಲು ಪೂರೈಕೆ ಮಾಡುವ ಭರವಸೆ ಅಗತ್ಯವಿರುತ್ತದೆ. ಸಿಮೆಂಟ್‌, ಸ್ಟೀಲ್‌ ಮತ್ತು ವಿದ್ಯುತ್‌ ಉದ್ಯಮಗಳಿಗೆ ಕಲ್ಲಿದ್ದಲು ಮಹತ್ವದ ಕಚ್ಚಾವಸ್ತು ಆಗಿದೆ.

ಕಳೆದ ವರ್ಷ ಭಾರತವು ಸುಮಾರು 23 ಬಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸವನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಈ ರೀತಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ, ಸರ್ಕಾರದ ಈ ಕ್ರಮದಿಂದ ಮಹತ್ವದ ಬದಲಾವಣೆಯಾಗಲಿದೆ. ಇದರಿಂದ ಕಲ್ಲಿದ್ದಲು ಆಮದು ಪ್ರಮಾಣ ಕಡಿಮೆಯಾಗಲಿದೆ. ಸುಮಾರು 13 ಕೋಟಿ ಟನ್‌ಗಳಷ್ಟು ಕಲ್ಲಿದ್ದಲು ಆಮದು ಕಡಿಮೆ ಮಾಡಬಹುದು. ಇದು ಬೊಕ್ಕಸಕ್ಕೆ ಭಾರಿ ಅನುಕೂಲವನ್ನೂ ಮಾಡಿಕೊಡಲಿದೆ. ದೇಶದಲ್ಲೇ ಕಲ್ಲಿದ್ದಲನ್ನು ನಮಗೆ ಪಡೆಯಲು ಸಾಧ್ಯವಾದರೆ ಕಡಿಮೆ ವೆಚ್ಚದಲ್ಲಿ ನಮಗೆ ಅದು ಸಿಗಲಿದೆ.

ಕೇಂದ್ರ ಸರ್ಕಾರದ ಅಂದಾಜಿನ ಪ್ರಕಾರ ಈ ಹೊಸ ಸುಧಾರಣೆಯಿಂದಾಗಿ, ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸ್ಫರ್ಧೆ ಹೆಚ್ಚಲಿದೆ. ಅಷ್ಟೇ ಅಲ್ಲ, ಇದರಿಂದಾಗಿ ಸಹಜವಾಗಿಯೇ ಕಲ್ಲಿದ್ದಲು ಉತ್ಪಾದನೆಯೂ ಹೆಚ್ಚಲಿದೆ. ಬಹುದೇಶಿ ಕಂಪನಿಗಳು ಇನ್ನು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ಕಲ್ಲಿದ್ದಲು ವಲಯದಲ್ಲಿ ಮಹತ್ವದ ಸುಧಾರಣೆಯೂ ಕಂಡುಬರಲಿದೆ. ಭೂತಳದಲ್ಲಿರುವ ಕಲ್ಲಿದ್ದಲು ಉತ್ಖನನ ಮಾಡಲು ವಿದೇಶಿ ಕಂಪನಿಗಳು ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನಗಳು ಭಾರತಕ್ಕೆ ಬರಲಿವೆ. ಇದರಿಂದ ಕಲ್ಲಿದ್ದಲು ಕ್ಷೇತ್ರ ಆಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆ. ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಕುಂಠಿತವಾಗುತ್ತಲೇ ಇದೆ. ಇದು ಉತ್ಪಾದನಾ ವಲಯಕ್ಕೆ ಭಾರಿ ಹೊಡೆತ ನೀಡುತ್ತಿದೆ.

ಸದ್ಯಕ್ಕೆ ಕೋಲ್‌ ಇಂಡಿಯಾ ಭಾರತದಲ್ಲಿ ಕಲ್ಲಿದ್ದಲು ವಲಯದಲ್ಲಿ ಪಾರಮ್ಯ ಸಾಧಿಸಿದೆ. ದೇಶದ ಕಲ್ಲಿದ್ದಲು ಉತ್ಪಾದನೆಯಲ್ಲಿ ಮುಕ್ಕಾಲು ಭಾಗದಷ್ಟನ್ನು ಕೋಲ್ ಇಂಡಿಯಾ ಮಾಡುತ್ತದೆ. ಆದರೆ, ಇದು ತನ್ನ ಗುರಿಯನ್ನು ತಲುಪುವಲ್ಲಿ ವರ್ಷದಿಂದ ವರ್ಷಕ್ಕೆ ಹಿಂದೆ ಬೀಳುತ್ತಿದೆ. ಹೀಗಾಗಿ ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಅನಿವಾರ್ಯ ಸರ್ಕಾರಕ್ಕೆ ಉಂಟಾಗಿದ್ದು, ಇದರಿಂದ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತಿದೆ. ಕಲ್ಲಿದ್ದಲು ಗಣಿಗಳನ್ನು ರಾಷ್ಟ್ರೀಕರಣಗೊಳಿಸಿದ ಎರಡು ವರ್ಷಗಳ ನಂತರ ಅಂದರೆ 1973 ರಲ್ಲಿ ಕೋಲ್ ಇಂಡಿಯಾ ಕಂಪನಿ ಹುಟ್ಟಿಕೊಂಡಿತು. ಅಂದಿನಿಂದಲೂ, ದೇಶದ ಪ್ರಗತಿಗೆ ಅತ್ಯಂತ ಅಮೂಲ್ಯವಾದ ಈ ಇಂಧನವನ್ನು ಪೂರೈಸುವಲ್ಲಿ ಕೋಲ್ ಇಂಡಿಯಾ ವರ್ಷದಿಂದ ವರ್ಷಕ್ಕೆ ಗುರಿ ತಪ್ಪುತ್ತಲೇ ಇದೆ.

ಹೀಗಾಗಿ ಕಲ್ಲಿದ್ದಲನ್ನೇ ಅವಲಂಬಿಸಿರುವ ಕಂಪನಿಗಳು ವಿದೇಶವನ್ನು ಅವಲಂಬಿಸಿವೆ ಮತ್ತು ವಿದೇಶಗಳ ಹೂಡಿಕೆಯನ್ನೇ ನೆಚ್ಚಿಕೊಂಡಿವೆ.
ಇದೇ ಕಾರಣದಿಂದ ಮೋದಿ ಸರ್ಕಾರವು ಈ ಒಟ್ಟು ವ್ಯವಸ್ಥೆಯನ್ನು ಸರಿಪಡಿಸುವ ಕ್ರಮಕ್ಕೆ ಮುಂದಾಗಿದೆ. ನಿರೀಕ್ಷೆಗಳ ವಿಚಾರದಲ್ಲಿ ಸುಧಾರಿತ ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸಲಿವೆ. ಕೋಲ್‌ ಇಂಡಿಯಾವನ್ನು ಮಹಾರತ್ನ ಕಂಪನಿ ಎಂದು ಪರಿಗಣಿಸಲಾಗಿದ್ದು, ಸುಮಾರು 60 ಕೋಟಿ ಟನ್‌ ಕಲ್ಲಿದ್ದಲನ್ನು ಉತ್ಪಾದಿಸುತ್ತದೆ. ಒಂದು ವೇಳೆ ಇದು ತನ್ನನ್ನು ಆಧುನಿಕತೆಯ ಸುಧಾರಣೆಗೆ ಒಡ್ಡಿಕೊಂಡು 100 ಮಿಲಿಯನ್‌ ಟನ್‌ಗಳಷ್ಟು ಕಲ್ಲಿದ್ದಲು ಉತ್ಪಾದನೆ ಗುರಿಯನ್ನು 2023-24 ರ ವೇಳೆಗೆ ತಲುಪದೇ ಇದ್ದರೆ, ಇದು ಮತ್ತೊಂದು ಬಿಎಸ್‌ಎನ್‌ಎಲ್‌ ಆಗಲಿದೆ. ಈಗಾಗಲೇ ಟೆಲಿಕಾಂ ವಲಯದಲ್ಲಿ ಖಾಸಗಿ ಕಂಪನಿಗಳು ಮಾಡುತ್ತಿರುವ ಹೂಡಿಕೆ ಮತ್ತು ಸುಧಾರಣೆಗಳಿಂದಾಗಿ ಬಿಎಸ್‌ಎನ್‌ಎಲ್‌ ನೆಲಕಚ್ಚುತ್ತಿರುವ ಸ್ಥಿತಿಯನ್ನೇ ಕೋಲ್ ಇಂಡಿಯಾ ಮುಂದಿನ ದಿನಗಳಲ್ಲಿ ಎದುರಿಸುವುದು ನಿಶ್ಚಿತ.

ಇನ್ನೊಂದೆಡೆ ದೇಶದ ಸಮಗ್ರ ಅಭಿವೃದ್ಧಿಗೆ ವಿದೇಶಿ ಹೂಡಿಕೆಯನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಅಲ್ಲದೆ, ನೇರ ಮತ್ತು ಪರೋಕ್ಷ ಉದ್ಯೋಗ ಅವಕಾಶಗಳು ಹೆಚ್ಚಳವಾಗುವ ಮತ್ತು ಸೃಷ್ಟಿಯಾಗುವ ನಿರೀಕ್ಷೆಯನ್ನೂ ಸರ್ಕಾರ ವ್ಯಕ್ತಪಡಿಸಿದೆ. ಆದರೆ ಕೋಲ್ ಇಂಡಿಯಾದಲ್ಲಿ ಪ್ರಸ್ತುತ ಉದ್ಯೋಗ ಹೊಂದಿರುವ ಸುಮಾರು 3 ಮಿಲಿಯನ್‌ ನೌಕರರ ಹಿತರಕ್ಷಣೆಯನ್ನೂ ಸರ್ಕಾರ ಗಮನದಲ್ಲಿ ಇಟ್ಟುಕೊಳ್ಳಬೇಕಿದೆ. ಈಗ ಕೋಲ್‌ ಇಂಡಿಯಾ ಈ ನಿಟ್ಟಿನಲ್ಲಿ ಶ್ರಮಿಸುವ ಅವಕಾಶ ಎದುರಾಗಿದೆ. ಹೆಚ್ಚು ಕಲ್ಲಿದ್ದಲು ಗಣಿಗಳನ್ನು ಕೋಲ್ ಇಂಡಿಯಾಗೆ ನೀಡಲಾಗುತ್ತದೆ ಎಂದು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಷಿ ಹೇಳಿದ್ದಾರೆ. ಎಫ್‌ಡಿಐ ಒಳಹರಿವು ಒಂದು ಹಂತಕ್ಕೆ ಸ್ಥಿರವಾಗುವವರೆಗೆ ಕೋಲ್ ಇಂಡಿಯಾಗೆ ಸುಧಾರಿಸಿಕೊಳ್ಳುವ ಅವಕಾಶ ಇದೆ. ಒಂದು ವೇಳೆ ಈ ವೇಳೆಗೆ ಕೋಲ್ ಇಂಡಿಯಾ ಸುಧಾರಿಸಿಕೊಂಡು ದಕ್ಷವಾಗಿ ತನ್ನ ಗುರಿಯನ್ನು ತಲುಪಿದರೆ ಅದು ಇಡೀ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಲಿದೆ.

ಕಲ್ಲಿದ್ದಲನ್ನು ಕಪ್ಪು ಚಿನ್ನ ಎಂದೇ ಕರೆಯಲಾಗುತ್ತದೆ. ಆದರೆ, ಭಾರತದಲ್ಲಿ ನಿಕ್ಷೇಪ ಮತ್ತು ಆಮದು ವಿಚಾರದಲ್ಲಿ ವಿಚಿತ್ರ ಸನ್ನಿವೇಶವಿದೆ. ಅತ್ಯಧಿಕ ಕಲ್ಲಿದ್ದಲು ನಿಧಿಯನ್ನು ಹೊಂದಿರುವ ದೇಶಗಳಲ್ಲಿ ಅಮೆರಿಕ, ರಷ್ಯಾ, ಆಸ್ಟ್ರೇಲಿಯಾ ಮತ್ತು ಚೀನಾ ನಂತರದಲ್ಲಿ ಭಾರತ ಐದನೇ ಸ್ಥಾನದಲ್ಲಿ ನಿಂತಿದೆ. ಆದರೆ ಆಮದು ವಿಚಾರಕ್ಕೆ ಬಂದರೆ ಭಾರತ ಎರಡನೇ ಸ್ಥಾನಲ್ಲಿದೆ. ಭಾರತ 16.2 ಶೇ. ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದ್ದು, ಶೇ. 16.7 ಆಮದು ಮಾಡಿಕೊಳ್ಳುವ ಜಪಾನ್‌ ಮೊದಲ ಸ್ಥಾನದಲ್ಲಿದೆ. ರಾಷ್ಟ್ರೀಕರಣ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ತಮಗೆ ಬೇಕಾದ ವ್ಯಕ್ತಿಗಳಿಗೆ ಕಲ್ಲಿದ್ದಲು ಗಣಿಗಳನ್ನು ಹಂಚಿಕೆ ಮಾಡಿಕೊಂಡು ಈ ಹಿಂದಿನ ಯುಪಿಎ ಸರ್ಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದು ಎಲ್ಲರಿಗೂ ತಿಳಿದ ಸಂಗತಿ. 1993 ರಿಂದಲೂ ಈ ಭ್ರಷ್ಟ ಕೆಲಸವೇ ನಡೆಯುತ್ತಿತ್ತು. ಇದೇ ಕಾರಣಕ್ಕೆ 2014 ರಲ್ಲಿ ಸುಪ್ರೀಂಕೋರ್ಟ್‌ ಎಲ್ಲ ಕಲ್ಲಿದ್ದಲು ಉತ್ಖನನ ಗುತ್ತಿಗೆಗಳನ್ನೂ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಅದು ಆಗಿನಿಂದ ಆರು ವರ್ಷಗಳವರೆಗಿನ ಎಲ್ಲ ಕಲ್ಲಿದ್ದಲು ಗುತ್ತಿಗೆಗಳಿಗೆ ಅನ್ವಯವಾಗಿತ್ತು. ಸದ್ಯ ಮೋದಿ ಸರ್ಕಾರ ರೂಪಿಸಿರುವ ಇ-ಬಿಡ್ಡಿಂಗ್ ಪ್ರಕ್ರಿಯೆಯು ಪಾರದರ್ಶಕತೆಯನ್ನು ಪ್ರೋತ್ಸಾಹಿಸುತ್ತಿದ್ದು, ಉತ್ತಮ ಫಲಿತಾಂಶ ನೀಡುವ ನಿರೀಕ್ಷೆಯಿದೆ.

ವಿದೇಶಗಳಿಂದ ಭಾರತವು ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಪ್ರಮಾಣವನ್ನು ಕೋಲ್ ಇಂಡಿಯಾ ಮತ್ತು ಇತರ ಬಹುರಾಷ್ಟ್ರೀಯ ಕಂಪನಿಗಳು ಕಡಿಮೆ ಮಾಡಬೇಕು. ಇದಕ್ಕಾಗಿ ಉತ್ಪಾದನೆಯ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಹೆಚ್ಚಳ ಕಾಣಬೇಕಿದೆ. ರದ್ದಾದ ಕಲ್ಲಿದ್ದಲು ಗಣಿಗಳ ಪೈಕಿ ಕೇವಲ ಇಪ್ಪತ್ತೊಂಬತ್ತು ಕಲ್ಲಿದ್ದಲು ಗಣಿಗಳನ್ನು ಹರಾಜಿಗೆ ಹಾಕಲಾಗಿದೆ. ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುವುದನ್ನು ಕೈಬಿಡಬೇಕಾಗಿದೆ.

ಕಲ್ಲಿದ್ದಲು ವಲಯದಲ್ಲಿನ ಸುಧಾರಣೆಗಳನ್ನು ಶೀಘ್ರದಲ್ಲಿ ಜಾರಿಗೆ ತರುವ ಹೊಣೆಗಾರಿಕೆ ಆಡಳಿತ ವ್ಯವಸ್ಥೆಯ ಮೇಲಿದೆ. ಉದ್ಯಮಕ್ಕೆ ಪೂರಕ ವಾತಾವರಣ ಈ ವಲಯದಲ್ಲಿ ನಿರ್ಮಾಣವಾದರೆ ಮಾತ್ರ ವಿದೇಶಿ ಕಂಪನಿಗಳಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತದೆ. ಆಗ ಮಾತ್ರ ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆಗೆ ಮುಂದಾಗುತ್ತವೆ. ಸರ್ಕಾರವು ಗಣಿಗಾರಿಕೆಗೆ ಸಂಬಂಧಿಸಿದಂತೆ ನೀತಿ ಮತ್ತು ನಿಯಮಗಳನ್ನು ಅಂತಿಮಗೊಳಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ. ಗಣಿಗಾರಿಕೆ ನಡೆಸುವ ಕಂಪನಿಗಳು ಗಣಿಗಾರಿಕೆ ಮುಗಿದ ನಂತರ ಈ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪರಿಸರವನ್ನು ರಕ್ಷಿಸಬೇಕು ಎಂದೂ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.

ಕೇಂದ್ರ ಸರ್ಕಾರವು ಆರಂಭಿಸಿದ ಸುಧಾರಣೆಗಳು ಧನಾತ್ಮಕವಾಗಿರಬೇಕು. ಅಷ್ಟೇ ಅಲ್ಲ, ಜೀವವೈವಿಧ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ನೀಡಿದ ನಿರ್ದೇಶಗಳಿಗೆ ಪೂರಕವಾಗಿರಬೇಕು. ಆಗ ಮಾತ್ರ ದೇಶದಲ್ಲಿ ಕಲ್ಲಿದ್ದಲು ವಲಯದಲ್ಲಿ ಸುಧಾರಣೆಯ ಜೊತೆಗೇ ಪರಿಸರ ನಾಶವನ್ನೂ ಕಡಿಮೆ ಮಾಡಬಹುದು.

ABOUT THE AUTHOR

...view details