ಪಾಟ್ನಾ (ಬಿಹಾರ): ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಮುಖಂಡ ತೇಜ್ ಪ್ರತಾಪ್ ಯಾದವ್ ಅವರು ಸಹೋದರ ತೇಜಸ್ವಿ ಯಾದವ್ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಸಿಎಂ ಕುರ್ಚಿಯನ್ನು ನೀಡುವುದಾಗಿ ಹೇಳಿದ್ದಾರೆ.
ತೇಜಸ್ವಿ ಅವರಿಗೆ ಸೋಮವಾರ 31 ವರ್ಷ ತುಂಬಿದೆ. ಅವರ ಜನ್ಮ ದಿನವನ್ನು ಆರ್ಜೆಡಿ ಬೆಂಬಲಿಗರು ದೇಶಾದ್ಯಂತ ಆಚರಿಸುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಸಿಎಂ ಕುರ್ಚಿಯನ್ನು ನೀಡುವುದಾಗಿ ತೇಜ್ ಪ್ರತಾಪ್ ಯಾದವ್ ಭರವಸೆ ನೀಡಿದ್ದಾರೆ.
ಬಿಹಾರದ ಜನರು ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ಬೇಡವೆಂದು ಹೇಳಿದ್ದಾರೆ. ಜೆಡಿಯು ಸರ್ಕಾರದಿಂದ ರಾಜ್ಯದಲ್ಲಿ ನಿರುದ್ಯೋಗದಂತಹ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಆದ್ದರಿಂದಾಗಿ ಜನರು ನಮಗೆ ಬೆಂಬಲ ನೀಡಿದ್ದಾರೆ. ಅದೂ ಅಲ್ಲದೇ ಜೆಡಿಯು ಸರ್ಕಾರದ ವೇಳೆ ಭ್ರಷ್ಟಾಚಾರವಿತ್ತು ಎಂದು ತೇಜ್ ಪ್ರತಾಪ್ ಯಾದವ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಕೀರ್ತಿ ಜಾ ಆಜಾದ್ ಕೂಡ ತೇಜಸ್ವಿ ಯಾದವ್ ಅವರನ್ನು ಅಭಿನಂದಿಸಿದ್ದಾರೆ. ಜೊತೆಗೆ ಬಿಹಾರದಲ್ಲಿ ತೇಜಸ್ವಿ ಯಾದವ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಗೆ ಕಾಂಗ್ರೆಸ್ ಪಕ್ಷವು ನಿರ್ಣಾಯಕ ಪಾತ್ರ ವಹಿಸುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ತೇಜಸ್ವಿ ಬಿಹಾರದ ಸಿಎಂ ಆಗಿ ಆಯ್ಕೆಯಾದರೆ, ತಂದೆ ಲಾಲು ಪ್ರಸಾದ್ ಯಾದವ್ ಮತ್ತು ತಾಯಿ ರಾಬ್ರಿ ದೇವಿ ನಂತರ ಮುಖ್ಯಮಂತ್ರಿಯಾಗುವ ಅವರ ಕುಟುಂಬದ ಮೂರನೇ ವ್ಯಕ್ತಿಯಾಗಿ ತೇಜಸ್ವಿ ಹೊರಹೊಮ್ಮುತ್ತಾರೆ.