ಲಖನೌ(ಉತ್ತರ ಪ್ರದೇಶ): ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಮೂವರು ಸದಸ್ಯರ ವಿಶೇಷ ತನಿಖಾ ದಳ ರಚಿಸಿದ ಉತ್ತರ ಪ್ರದೇಶದ ಸಿಎಂ, 7 ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸಲು ಎಸ್ಐಟಿಗೆ ಸೂಚನೆ ನೀಡಿದ್ದಾರೆ. ಅಲ್ಲದ ಸಂತ್ರಸ್ತೆಗೆ ಶೀಘ್ರವಾಗಿ ನ್ಯಾಯ ಒದಗಿಸಲು ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ನಿರ್ದೇಶನ ನೀಡಿದ್ದಾರೆ.
ಹಥ್ರಾಸ್ ಗ್ಯಾಂಗ್ ರೇಪ್ ಅಪರಾಧಿಗಳನ್ನು ಬಿಡುವುದಿಲ್ಲ, ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದೆ. ಘಟನೆ ಬಗ್ಗೆ ಪ್ರಧಾನಿ ಮೋದಿ ನನ್ನ ಜೊತೆ ಮಾತನಾಡಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ಸೆಪ್ಟಂಬರ್ 14 ರಂದು ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಮಂಗಳವಾರ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಇಂದು ಬೆಳಗ್ಗೆ ಸ್ಥಳೀಯರ ಹಾಗೂ ಕುಟುಂಬಸ್ಥರ ವಿರೋಧದ ನಡುವೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ನಾವು ಬೆಳಗ್ಗೆ ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ಪೊಲೀಸರಿಗೆ ತಿಳಿಸಿದ್ದೆವು. ಆದರೆ ಅಂತ್ಯಸಂಸ್ಕಾರ ನಡೆಸಲು ಅವರು ತರಾತುರಿಯಲ್ಲಿದ್ದರು, ಆದಷ್ಟು ಬೇಗ ಮಾಡಿ ಮುಗಿಸುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದರು. ಮೃತಪಟ್ಟು 24 ಗಂಟೆ ಕಳೆದ ಕಾರಣ ದೇಹವು ಕೊಳೆಯುತ್ತಿದೆ ಎಂದರು. ಇನ್ನೂ ಆನೇಕ ಜನ ಸಂಬಂಧಿಕರು ಆಗಮಿಸಬೇಕಿತ್ತು. ಹೀಗಾಗಿ ಬೆಳಗ್ಗೆ ಅಂತ್ಯಸಂಸ್ಕಾರ ನಡೆಸಲು ಬಯಸಿದ್ದೆವು ಎಂದು ಸಂತ್ರಸ್ತೆಯ ಸಹೋದರ ತಿಳಿಸಿದ್ದಾರೆ.