ವಿಜಯವಾಡ:ಆಂಧ್ರಪ್ರದೇಶ ಮುಖ್ಯಮಂತ್ರಿ ಗಾದಿಗೆ ಏರಿದ ಬಳಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟಿರುವ ಸಿಎಂ ಜಗನ್ಮೋಹನ ರೆಡ್ಡಿ ಸದ್ಯ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಿರ್ಮಿಸಿದ್ದ ಕಟ್ಟಡವೊಂದನ್ನು ನೆಲಸಮ ಮಾಡಲು ಆದೇಶಿಸಿದ್ದಾರೆ.
ತಾತ್ಕಾಲಿಕ ಅವಧಿಗೆ ನಿರ್ಮಿಸಲಾಗಿದ್ದ ಪ್ರಜಾ ವೇದಿಕಾ ಎನ್ನುವ ಹೆಸರಿನ ಕಟ್ಟಡವನ್ನು ಕೆಡವಲು ಸಿಎಂ ಜಗನ್ ಆದೇಶ ಹೊರಡಿಸಿದ್ಧಾರೆ. ವಿಶೇಷ ಎಂದರೆ ಇದೇ ಕಟ್ಟಡದಲ್ಲಿ ಕಲೆಕ್ಟರ್ಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಜಗನ್ ಅದೇ ದಿನ ಕಟ್ಟಡ ನೆಲಸಮ ಮಾಡಲು ಆದೇಶಿಸಿದ್ದಾರೆ.
ಪ್ರಜಾ ವೇದಿಕಾ ಕಟ್ಟಡದ ಬಗ್ಗೆ ಸಿಎಂ ಜಗನ್ ಮಾತು ಸುಮಾರು ಎಂಟು ಕೋಟಿ ವೆಚ್ಚದಲ್ಲಿ ಪ್ರಜಾ ವೇದಿಕಾ ಕಟ್ಟಡವನ್ನು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಮಾಡಲಾಗಿದೆ. ಶ್ರೀಸಾಮಾನ್ಯ ನೊಬ್ಬ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸಿದರೆ ಅದನ್ನು ಕೆಡವಲಾಗುತ್ತದೆ. ಆದರೆ, ಸರ್ಕಾರಿ ಕಟ್ಟಡಕ್ಕೂ ಇದು ಅನ್ವಯವಾಗಬೇಕು ಎಂದಿರುವ ಸಿಎಂ ಜಗನ್, ಸಭೆಯ ಬಳಿಕ ಪ್ರಜಾ ವೇದಿಕಾ ಕಟ್ಟಡ ನೆಲಸಮ ಮಾಡಲು ಆದೇಶ ನೀಡಿದ್ದಾರೆ.
ಕಟ್ಟಡ ನಿರ್ಮಾಣದ ವೇಳೆ ಪ್ರತಿಯೊಂದು ಹಂತದಲ್ಲೂ ಅಕ್ರಮ ನಡೆದಿದೆ ಎಂದಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ದಾಖಲೆ ಸಮೇತ ಎಲ್ಲ ಮಾಹಿತಿಯನ್ನು ಒದಗಿಸಿದ್ದಾರೆ.