ನವದೆಹಲಿ:ಬಾಕಿ ವೇತನ ಪಾವತಿಸಿ ಏರ್ ಇಂಡಿಯಾ ತೊರೆಯಲು ಅವಕಾಶ ಮಾಡಿಕೊಡಬೇಕು ಎಂದು ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘವು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜುಲೈ 8 ರಂದು ಈ ಕುರಿತು ಇಂಡಿಯನ್ ಪೈಲಟ್ಸ್ ಗಿಲ್ಡ್, ಮೊಕಾ ಮತ್ತು ಸಿಎಂಡಿ ಅಧಿಕಾರಿಗಳು ಜಂಟಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೈಲಟ್ ಅಸೋಸಿಯೇಷನ್ ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಮುಂದೆ ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಬಾಕಿ ವೇತನ ಪಾವತಿಸಿ ಏರ್ ಇಂಡಿಯಾ ತೊರೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೈಲಟ್‌ಗಳ ವೇತನ ಕಡಿತಗೊಳಿಸಿ ಹೊರೆಯಾಗಿಸುವುದನ್ನು ನಾವು ಆರಂಭದಲ್ಲಿ ವಿರೋಧಿಸಿದ್ದೆವು. ಆದರೆ, ಬಳಿಕ ಸಂಸ್ಥೆಯ ಹಿತ ದೃಷ್ಟಿಯಿಂದ ಒಪ್ಪಿಕೊಂಡೆವು. ಒಟ್ಟು ವೇತನಕ್ಕೆ ಅನುಗುಣವಾಗಿ ಶೇಕಡವಾರು ವೇತನ ಕಡಿತಗೊಳಿಸುವ ಮೂಲಕ ಏರ್ ಇಂಡಿಯಾ ಆರ್ಥಿಕ ಹೊರೆ ಹಂಚಿಕೊಳ್ಳುತ್ತದೆ ಎಂದು ಪೈಲಟ್ ಅಸೋಸಿಯೇಷನ್ ತಿಳಿಸಿದೆ.
ವೇತನ ಕಡಿತಗೊಳಿಸುವುದಾದರೆ ಮಾರುಕಟ್ಟೆಯ ಅನುಗುಣವಾಗಿ ಸಂಸ್ಥೆಯ ಎಲ್ಲ ಉದ್ಯೋಗಿಗಳ ಶೇಕಡಾವಾರು ವೇತನ ಕಡಿತಗೊಳಿಸಬೇಕು. ಅಲ್ಲದೇ ಪೈಲಟ್ಗಳಿಗೆ ಒಂದು ತಿಂಗಳ ರಜೆ ನೀಡಬೇಕು ಎಂದು ಅಸೋಸಿಯೇಷನ್ ಬೇಡಿಕೆ ಇಟ್ಟಿದೆ.
ಮೇಲಿನ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ದೀರ್ಘಾವಧಿಯಿಂದ ಬಾಕಿ ಇರುವ ಶೇ. 25 ರಷ್ಟು ಬಾಕಿ ವೇತನವನ್ನು ತಕ್ಷಣ ಪಾವತಿಸಿ ಸಂಸ್ಥೆ ತೊರೆಯಲು ಅವಕಾಶ ನೀಡಬೇಕು ಎಂದು ತಿಳಿಸಿದೆ. ಜುಲೈ 13 ರಂದು ಮುಂದಿನ ಸಭೆ ನಿಗದಿಯಾಗಿದ್ದು, ಈ ಕುರಿತು ಅಂತಿಮ ನಿರ್ಧಾರವಾಗಲಿದೆ.