ಚೆನ್ನೈ (ತಮಿಳುನಾಡು): ತಮಿಳುನಾಡು ಶಾಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಆನ್‌ಲೈನ್ ತರಗತಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿತದೃಷ್ಟಿಯಿಂದ, ದೇಶಾದ್ಯಂತ ಹೆಚ್ಚಿನ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ. ಈ ಪರಿಸ್ಥಿತಿಯಲ್ಲಿ ಚೆನ್ನೈನಲ್ಲಿ ದುರಂತ ಸಂಭವಿಸಿದೆ. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಮೊಬೈಲ್ ಫೋನ್ ಇಲ್ಲವೆಂದು 12ನೇ ತರಗತಿಯ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಮಿಳುನಾಡಿನ ಚೆನ್ನೈನ ರಾಮಪುರಂ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಸಂತ್ರಸ್ತೆಯನ್ನು ಯಮಾನಿ ಎಂದು ಗುರುತಿಸಲಾಗಿದೆ. ಈಕೆ ರಾಮಪುರಂನ ಖಾಸಗಿ ಶಾಲೆಯಲ್ಲಿ 12 ನೇ ತರಗತಿ ವಿದ್ಯಾರ್ಥಿಯಾಗಿದ್ದಳು.
ಯಮಾನಿ ತನ್ನ ಚಿಕ್ಕಮ್ಮನ ಫೋನ್ ಬಳಸಿ ಆನ್‌ಲೈನ್‌ನಲ್ಲಿ ಕ್ಲಾಸ್ಗಳಲ್ಲಿ ಭಾಗಿಯಾಗುತ್ತಿದ್ದಳು. ಆದರೆ ಅದು ಸಾಧ್ಯವಾಗದ ಹಿನ್ನೆಲೆ, ತನ್ನ ಸಹೋದರನಿಗೆ ಹೊಸ ಸ್ಮಾರ್ಟ್‌ಫೋನ್ ಕೊಡಿಸುವಂತೆ ಒತ್ತಡ ಹೇರಿದ್ದಳು. ಆದರೆ ಇವರ ಕುಟುಂಬದವರು ಆರ್ಥಿಕವಾಗಿ ಸಬಲರಾಗಿಲ್ಲದಿದ್ದರಿಂದ ಫೋನ್ ಕೊಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಎರಡು ದಿನಗಳ ನಂತರ ಸ್ಮಾರ್ಟ್ ಫೋನ್ ಕೊಡಿಸುವುದಾಗಿ ಆಕೆಯ ಸಹೋದರ ಹೇಳಿದ್ದರು. ಆದರೂ ಒತ್ತಡಕ್ಕೊಳಗಾದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಪೋಷಕರಿಗೆ ಹಸ್ತಾಂತರಿಸಲಾಯಿತು. ಇನ್ನು ಈ ಕುರಿತು ಪೊಲೀಸರು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದಕ್ಕೂ ಮುನ್ನ ತಿರುಪ್ಪತೂರು ಜಿಲ್ಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದನು.