ನವದೆಹಲಿ: ದೇಶದಲ್ಲಿ ಪರ-ವಿರೋಧ ಚರ್ಚೆ ಹಾಗೂ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆ ಇಂದು ಸಂಸತ್ತಿನ ಮೇಲ್ಮನೆ(ರಾಜ್ಯಸಭೆ)ಯಲ್ಲಿ ಗೃಹ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ.
ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿಉವ ಬಿಜೆಪಿ ಈ ಮಸೂದೆಯನ್ನು ಪ್ರತಿಪಕ್ಷಗಳ ವಿರೋಧದ ನಡುವೆಯೂ ಅಂಗೀಕಾರ ಮಾಡಿತ್ತು. ಆದರೆ, ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತದ ಕೊರತೆ ಇದೆ. ಹೀಗಾಗಿ ಇಂದಿನ ರಾಜ್ಯಸಭೆ ಕಲಾಪ ಕುತೂಹಲ ಮೂಡಿಸಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಗೃಹ ಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡನೆ ಮಾಡಲಿದ್ದಾರೆ. ಲೋಕಸಭೆಯಲ್ಲಿ ಇದೇ ಮಸೂದೆ 311 ಪರ ಹಾಗೂ 80 ವಿರೋಧದ ಮತಗಳಿಂದ ಅಂಗೀಕಾರವಾಗಿತ್ತು.
ರಾಜ್ಯಸಭೆಯಲ್ಲಿ ನಂಬರ್ಗೇಮ್:ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಲು ಮೋದಿ ಸರ್ಕಾರಕ್ಕೆ 245 ಸದಸ್ಯರ ಪೈಕಿ ಕನಿಷ್ಠ 121 ಸದಸ್ಯರು ಬೆಂಬಲ ಕೊಡಬೇಕು. ಆದರೆ, ರಾಜ್ಯಸಭೆಯಲ್ಲಿ 8 ಸ್ಥಾನಗಳು ಖಾಲಿಯಿರುವ ಕಾರಣ ಪ್ರಸ್ತುತ ಸದಸ್ಯರ ಸಂಖ್ಯೆ 238ಕ್ಕೆ ಇಳಿದಿದೆ. ಆದ್ದರಿಂದ ಬೆಂಬಲ ನೀಡುವವರ ಸದಸ್ಯರ ಸಂಖ್ಯೆಯೂ 121ಕ್ಕೆ ಇಳಿದಿದೆ. 105 ಸದಸ್ಯರನ್ನು ಹೊಂದಿರುವ ಎನ್‌ಡಿಎ ಮೈತ್ರಿಕೂಟಕ್ಕೆ ಇನ್ನೂ 16 ಸದಸ್ಯರು ಬೆಂಬಲ ಬೇಕೇಬೇಕು.
ಸದನದಲ್ಲಿ ಎನ್‌ಡಿಎ ಬಲ ಕೇವಲ 105 ಆಗಿದ್ದು, ಇದರಲ್ಲಿ ಬಿಜೆಪಿಯ 83 ಸದಸ್ಯರು, ಜನತಾದಳದ 6 ಮಂದಿ (ಜೆಡಿಯು), ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 3, ಎಲ್‌ಜೆಪಿ ಮತ್ತು ಆರ್‌ಪಿಐನ ತಲಾ ಒಬ್ಬರು ಮತ್ತು 11 ನಾಮ ನಿರ್ದೇಶಿತ ಸಂಸದರಿದ್ದಾರೆ.
11 ಸದಸ್ಯರನ್ನು ಹೊಂದಿರುವ ಎಐಎಡಿಎಂಕೆ, ಬಿಜೆಡಿ 7, ವೈಎಸ್‌ಆರ್ ಕಾಂಗ್ರೆಸ್ ಮತ್ತು ಟಿಡಿಪಿ ತಲಾ 2 ಇಬ್ಬರು ಸದಸ್ಯರನ್ನು ಹೊಂದಿವೆ. ಲೋಕಸಭೆಯಲ್ಲಿ ಈ ಎಲ್ಲ ಪಕ್ಷಗಳು ಮಸೂದೆ ಬೆಂಬಲಿಸಿದ್ದ ಕಾರಣ ರಾಜ್ಯಸಭೆಯಲ್ಲೂ ಗೆಲ್ಲುವ ವಿಶ್ವಾಸ ಕೇಸರಿ ಪಕ್ಷಕ್ಕೆ ಬಂದಿದೆ. ಆದರೆ, ಈಗಾಗಲೇ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆರ್ಜೆಡಿ ಸೇರಿದಂತೆ ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತವಾಗಿದೆ. ಲೋಕಸಭೆಯಲ್ಲಿ ಬೆಂಬಲಿಸಿದ್ದ ಶಿವಸೇನಾವೂ ಈಗ ತಿರುಗಿಬಿದ್ದಿದೆ. ಇದು ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ 46, ತೃಣಮೂಲ ಕಾಂಗ್ರೆಸ್ 13, ಸಮಾಜವಾದಿ ಪಕ್ಷ 9, ಎಡಪಂಥೀಯರ 6 ಮತ್ತು ಡಿಎಂಕೆ 5 ಮತ್ತು ಆರ್ಜೆಡಿ, ಎನ್‌ಸಿಪಿ ಮತ್ತು ಬಿಎಸ್‌ಪಿ ಸದಸ್ಯರಿದ್ದಾರೆ. ಇದಲ್ಲದೆ ಟಿಡಿಪಿಯ 2, ಮುಸ್ಲಿಂ ಲೀಗ್‌ನ 1, ಪಿಡಿಪಿಯ 2, ಜೆಡಿಎಸ್ 1, ಕೇರಳ ಕಾಂಗ್ರೆಸ್ 1 ಮತ್ತು ಟಿಆರ್‌ಎಸ್ 6 ಸದಸ್ಯರಿದ್ದಾರೆ. ಒಟ್ಟು 100 ಸದಸ್ಯರಿದ್ದಾರೆ.