ಪೌರತ್ವ ತಿದ್ದುಪಡಿ ಕಾಯ್ದೆ ಈಗ ಈಶಾನ್ಯ ಭಾರತದಲ್ಲಿ ಬೃಹತ್ ಗಲಭೆಗೆ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಅಸ್ಸೋಂ, ತ್ರಿಪುರಾ ಮತ್ತು ಶಿಲ್ಲಾಂಗ್‌ನಲ್ಲಿ ಯುದ್ಧದ ಪರಿಸ್ಥಿತಿ ಕಾಣಿಸುತ್ತಿದೆ. ಈ ಕಾಯ್ದೆ ಬಗ್ಗೆ ಒಂದಷ್ಟು ಜನ ಪರವಾಗಿ ಮಾತನಾಡಿದರೆ, ಅಷ್ಟೇ ಸಂಖ್ಯೆಯ ಜನರು ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ.
ದೇಶದ ವಿಭಜನೆಯ ನಂತರದಿಂದಲೂ ನಡೆಯುತ್ತಿದ್ದ ಅನ್ಯಾಯವು ಈ ಕಾಯ್ದೆಯ ಮೂಲಕ ಸರಿ ಆಗಿದೆ ಎಂದು ಪರವಾಗಿ ಮಾತನಾಡುವವರು ವಾದಿಸುತ್ತಿದ್ದಾರೆ. ಆದರೆ, ಇನ್ನೊಂದೆಡೆ ಇದು ಭಾರತದ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಇನ್ನೊಂದಷ್ಟು ಜನರು ವಿರೋಧಿಸುತ್ತಿದ್ದಾರೆ. ಧರ್ಮದ ಆಧಾರದಲ್ಲಿ ಈ ಕಾಯ್ದೆ ದೇಶವನ್ನೇ ವಿಭಜಿಸುತ್ತಿದೆ ಎಂಬುದು ಈ ಕಾಯ್ದೆಯನ್ನು ವಿರೋಧಿಸುವವರ ಆರೋಪ.
1995ರ ಪೌರತ್ವ ಕಾಯ್ದೆಯು ಹೇಳುವಂತೆ ಭಾರತಕ್ಕೆ ಯಾವ ದಾಖಲೆಯನ್ನೂ ಹೊಂದಿಲ್ಲದೇ ಪ್ರವೇಶಿಸುವ ಯಾವುದೇ ವ್ಯಕ್ತಿಯೂ ಅಕ್ರಮ ವಲಸಿಗ ಆಗಿರುತ್ತಾನೆ. ಹಾಗೆಯೇ ಆತನಿಗೆ ಭಾರತದ ಪೌರತ್ವ ಸಿಗುವುದಿಲ್ಲ ಎಂದು ಈ ಕಾಯ್ದೆ ಹೇಳುತ್ತದೆ. ಆದರೆ ಈ ಹೊಸ ತಿದ್ದುಪಡಿ ಕಾಯ್ದೆ ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅವಿಭಜಿತ ಭಾರತ ಅಂದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜೊತೆಗೆ ನೆರೆಯ ಅಫ್ಘಾನಿಸ್ತಾನದಿಂದ ಹಿಂಸೆಗೆ ಒಳಗಾಗಿ ಭಾರತದ ಗಡಿ ದಾಟಿ ಒಳಕ್ಕೆ ಆಗಮಿಸುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಶ್ರಯವನ್ನು ಈ ಕಾಯ್ದೆ ಒದಗಿಸುತ್ತದೆ.
ಇವರನ್ನು ಅಕ್ರಮ ವಲಸಿಗರು ಎಂದು ನೋಡಬಾರದು ಎಂದೇ ಈ ಹೊಸ ಕಾಯ್ದೆ ಹೇಳುತ್ತದೆ. ಅಷ್ಟೇ ಅಲ್ಲ, ಅವರಿಗೆ ಪೌರತ್ವವನ್ನೂ ಕೊಟ್ಟು ಭಾರತದ ನಾಗರಿಕರನ್ನಾಗಿ ಮಾಡುತ್ತದೆ. ತಮ್ಮನ್ನು ಇಸ್ಲಾಂ ರಾಷ್ಟ್ರಗಳು ಎಂದು ಘೋಷಿಸಿಕೊಂಡ ಈ ಮೂರು ದೇಶಗಳಿಂದ ಆಗಮಿಸುವ ಹಿಂದು, ಸಿಖ್, ಜೈನ, ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿಗಳಿಗೆ ಭಾರತದಲ್ಲಿ ಈ ಕಾಯ್ದೆಯ ಪ್ರಕಾರ ಪೌರತ್ವ ಸಿಗುತ್ತದೆ.
ಇವೆಲ್ಲವುಗಳ ಮಧ್ಯೆ ಆಸಕ್ತಿಕರ ಸಂಗತಿಯೆಂದರೆ, ಈ ಮೂರೂ ದೇಶಗಳಿಂದ ಆಗಮಿಸುವ ಮುಸ್ಲಿಮರಿಗೆ ಈ ಅನುಕೂಲವಿಲ್ಲ. ಮುಸ್ಲಿಮ್ ಆಗಿರುವ ಅಕ್ರಮ ವಲಸಿಗರು ಭಾರತದ ಪೌರತ್ವವನ್ನು ಪಡೆಯುವುದಿಲ್ಲ. ಮುಸ್ಲಿಮರು ಧಾರ್ಮಿಕ ಹಿಂಸೆಯನ್ನು ಅನುಭವಿಸುವುದಿಲ್ಲ. ಅವರು ಕೇವಲ ಒಳ್ಳೆಯ ಉದ್ಯೋಗ ಹಾಗೂ ಜೀವನ ಮಟ್ಟವನ್ನು ಅರಸಿ ಭಾರತಕ್ಕೆ ವಲಸೆ ಬರುತ್ತಾರೆ. ಹೀಗಾಗಿ ಅವರಿಗೆ ಪೌರತ್ವವನ್ನು ನೀಡುವುದಿಲ್ಲ. ಇದು ಹೊಸ ಕಾಯ್ದೆಯಲ್ಲಿರುವ ಬದಲಾವಣೆಯ ಸಾರ.
ದಶಕಗಳಷ್ಟು ಹಳೆಯ ಸಮಸ್ಯೆ
ತಮ್ಮ ದೇಶದಲ್ಲಿ ಮನೆ ಮಠಗಳನ್ನು ಕಳೆದುಕೊಂಡು ಸರ್ವಸ್ವವೂ ನಾಶವಾದ ಮೇಲೆ ತಮ್ಮ ಜೀವವನ್ನಾದರೂ ಉಳಿಸಿಕೊಳ್ಳೋಣ ಎಂದು ಬೇರೆ ದೇಶಕ್ಕೆ ಓಡಿ ಹೋಗಿ ನೆಲೆಸುವವರು ಆ ದೇಶದಲ್ಲಿ ಅಕ್ರಮ ವಲಸಿಗರಾಗುತ್ತಾರೆ. ಇವರ ಉದ್ದೇಶ ತಮ್ಮಜೀವನ ಮಟ್ಟ ಸುಧಾರಿಸಿಕೊಳ್ಳುವುದೇ ಆಗಿರುತ್ತದೆಯೇ ಹೊರತು ಮತ್ತೇನೂ ಅಲ್ಲ. 1947ರಲ್ಲಿ ದೇಶ ವಿಭಜನೆಯಾದಾಗ ಒಂದು ಅಂದಾಜಿನ ಪ್ರಕಾರ 1.5 ಕೋಟಿ ಜನರು ಭಾರತದಿಂದ ಪಾಕಿಸ್ತಾನಕ್ಕೂ ಪಾಕಿಸ್ತಾನದಿಂದ ಭಾರತಕ್ಕೂ ಬಂದಿದ್ದಾರೆ. ಈ ಪೈಕಿ 1.5 ಕೋಟಿ ಜನರು ಭಾರತದ ಮತ್ತು ಪಾಕಿಸ್ತಾನದ ಪಶ್ಚಿಮ ಭಾಗಕ್ಕೂ, ಸುಮಾರು 42 ಲಕ್ಷ ಜನರು ಪೂರ್ವ ಭಾಗಕ್ಕೂ ವಲಸೆ ಹೋಗಿದ್ದಾರೆ. ಇನ್ನೊಂದೆಡೆ ಇನ್ನೊಂದು ಅಂದಾಜಿನ ಪ್ರಕಾರ, 1959ರಲ್ಲಿ ಟಿಬೆಟ್‌ನಲ್ಲಿ ನಡೆದ ಸ್ಥಿತ್ಯಂತರದಲ್ಲಿ ಸುಮಾರು 80 ಸಾವಿರ ಜನರು ಭಾರತಕ್ಕೆ ಓಡಿಬಂದಿದ್ದಾರೆ. ಮತ್ತೂ ವಿಶೇಷವೆಂದರೆ ಬೌದ್ಧ ಗುರು ಹಾಗೂ ಧಾರ್ಮಿಕ ನಾಯಕ 14ನೇ ದಲಾಯಿ ಲಾಮಾ ಕೂಡ ಭಾರತಕ್ಕೆ ಓಡಿಬಂದು, ಇಲ್ಲಿ ಆಶ್ರಯ ಪಡೆದಿದ್ದಾರೆ.
1972ರಲ್ಲಿ ಉಗಾಂಡದಲ್ಲಿದ್ದ ಭಾರತೀಯರು ತೊಂದರೆಗೆ ಒಳಗಾಗಿದ್ದರು. ಅವರನ್ನೂ ಭಾರತಕ್ಕೆ ನಿರಾಶ್ರಿತರ ರೂಪದಲ್ಲಿ ಕರೆತಂದು ಆಶ್ರಯ ನೀಡಲಾಗಿದೆ. ಇನ್ನು ಶ್ರೀಲಂಕಾದಲ್ಲಿ ನಡೆದ ಹಿಂಸಾಚಾರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ತಮಿಳರು ನಿರಾಶ್ರಿತರಾಗಿದ್ದರು. ಇವರೂ ಕೂಡ ಭಾರತಕ್ಕೆ ವಲಸೆ ಬಂದು ನೆಲೆ ಕಂಡುಕೊಂಡಿದ್ದಾರೆ. ಈ ವಲಸಿಗರು ಭಾರತಕ್ಕೆ ಆಗಮಿಸಿದಾಗ ಯಾವ ಸಮಸ್ಯೆಯೂ ಕಂಡುಬರಲಿಲ್ಲ. ಆದರೆ ಭಾರತದಲ್ಲಿ ಅಕ್ರಮವಾಗಿ ವಲಸಿಗರು ಬರುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದು ದೊಡ್ಡ ಗಲಭೆಗೂ ಕಾರಣವಾಗುತ್ತಿದೆ.
ಭಾರತ ವಿಭಜನೆಯ ವೇಳೆ ಪಶ್ಚಿಮ ಭಾಗದಲ್ಲಿರುವ ಭಾರತೀಯರು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದರು. ಬಹುತೇಕವಾಗಿ ಈ ಸಮಯದಲ್ಲಿ ನಡೆದ ವಲಸೆಗೆ ಧಾರ್ಮಿಕ ಹಿಂಸಾಚಾರವೇ ಕಾರಣವಾಗಿತ್ತು. ಹಿಂದು ಮತ್ತು ಸಿಖ್ಖರು ಭಾರತಕ್ಕೆ ಬಂದಿದ್ದರೆ, ಮುಸ್ಲಿಮರು ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ್ದರು. ಆದರೆ, ಭಾರತದ ಪೂರ್ವ ಭಾಗದಲ್ಲಿನ ಸಮಸ್ಯೆಯೇ ಬೇರೆ ರೀತಿಯದ್ದು. ಕಾಲ ಸರಿದಂತೆ ರಾಜಕೀಯ ಚಿತ್ರಣ ಪೂರ್ವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಬದಲಾಗುತ್ತ ಸಾಗಿತು. ಈ ಪರಿಸ್ಥಿತಿಗೆ ಬಲಿಯಾದದ್ದು ಮಾತ್ರ ಭಾರತ. ಈ ಭಾಗದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಿದಷ್ಟೂ ಅಲ್ಲಿನ ಜನರು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬರಲು ಆರಂಭಿಸಿದರು. ಲಕ್ಷಾಂತರ ಜನರು ಈ ರೀತಿ ಭಾರತಕ್ಕೆ ವಲಸೆ ಬಂದಿದ್ದಾರೆ. ಈ ಅವಧಿಯೇ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಪ್ರವಾಹ ಆರಂಭವಾಗಲು ನಾಂದಿ ಹಾಡಿತು.
ಬಾಂಗ್ಲಾದೇಶದಿಂದ ಸುಮಾರು 2.40 ಕೋಟಿ ಅಕ್ರಮ ವಲಸಿಗರು ಭಾರತಕ್ಕೆ ಬಂದಿದ್ದಾರೆ ಎಂದು ಈ ಹಿಂದೆ ಸಂಸತ್ತಿನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಈ ಪೈಕಿ ಹೆಚ್ಚಿನ ಜನರು ಪಶ್ಚಿಮ ಬಂಗಾಳಕ್ಕೆ ಬಂದಿದ್ದಾರೆ. ಜನಸಾಮಾನ್ಯರು ಭಾವಿಸಿರುವ ಹಾಗೆ ಇವರೆಲ್ಲರೂ ಅಸ್ಸಾಮ್‌ಗೆ ತೆರಳಿಲ್ಲ. 75 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರು ಸದ್ಯ ಪಶ್ಚಿಮ ಬಂಗಾಳದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಪಶ್ಚಿಮ ಬಂಗಾಳ ಬಿಟ್ಟರೆ, ಅಕ್ರಮ ವಲಸಿಗರು ನೆಲೆ ಕಂಡುಕೊಂಡಿರುವ ರಾಜ್ಯಗಳೆಂದರೆ ಅಸ್ಸಾಂ ಮತ್ತು ತ್ರಿಪುರಾ. ಇವು ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ಈ ವಲಸಿಗರ ಸಮಸ್ಯೆಯ ಬಿಸಿ ರಾಷ್ಟ್ರ ರಾಜಧಾನಿಗೂ ತಟ್ಟದೇ ಬಿಟ್ಟಿಲ್ಲ. ಅಂದಾಜಿನ ಪ್ರಕಾರ 7 ರಿಂದ 8 ಲಕ್ಷ ಅಕ್ರಮ ವಲಸಿಗರು ದೆಹಲಿಯಲ್ಲಿದ್ದಾರೆ. ಇದೇ ರೀತಿ ಭಾರಿ ಸಂಖ್ಯೆಯಲ್ಲಿ ಇವರು ಉತ್ತರ ಪ್ರದೇಶ, ಕೇರಳ ಮತ್ತು ಹೈದರಾಬಾದ್‌ಗೂ ಬಂದು ನೆಲೆಸಿದ್ದಾರೆ. ತುಂಬ ಹಿಂದಿನಿಂದಲೂ ಅಸ್ಸಾಮ್‌ನಲ್ಲಿ ಅಕ್ರಮ ವಲಸಿಗರ ಬಗ್ಗೆ ಪ್ರತಿಭಟನೆ ವಿರೋಧ ನಡೆಯುತ್ತಲೇ ಇದೆ ಎಂಬುದು ತಿಳಿಯದ ಸಂಗತಿಯೇನಲ್ಲ. ಈ ವಲಸೆಯಿಂದಲೇ ಹಿಂದುಗಳು ಮತ್ತು ಮುಸ್ಲಿಮರ ಮಧ್ಯೆ ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣವಾಗಿದೆ. ಇದರಿಂದಾಗಿಯೇ ಜನಸಂಖ್ಯೆಯಲ್ಲಿ ಅಪಾರ ಏರಿಕೆಯೂ ಆಗಿದೆ. 25 ಲಕ್ಷದಿಂದ 35 ಲಕ್ಷಕ್ಕೆ ಜನಸಂಖ್ಯೆ ವಲಸೆಯಿಂದಲೇ ಏರಿಕೆಯಾಗಿದೆ.
ಅಸ್ಸಾಮಿನ ಜನರಿಗೆ ಇದು ಅಸ್ತಿತ್ವದ ಪ್ರಶ್ನೆ, ತಮ್ಮ ಮಾತೃಭಾಷೆ, ತಮ್ಮ ಸಂಸ್ಕೃತಿಯನ್ನು ವಲಸಿಗರಿಂದ ಉಳಿಸಿಕೊಳ್ಳುವ ಅನಿವಾರ್ಯ ಅವರಿಗೆ ಇದೆ. ವಲಸಿಗರಿಗೆ ಹೋಲಿಸಿದರೆ ಅಸ್ಸಾಮ್‌ನಲ್ಲಿ ಮೂಲನಿವಾಸಿಗಳ ಸಂಖ್ಯೆ ಶೇಕಡಾ 50 ಕ್ಕೂ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿಯೇ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡು, ರಾಷ್ಟ್ರೀಯ ಪೌರತ್ವ ನೋಂದಣಿಯನ್ನೂ ಆರಂಭಿಸಿತು. ಇದರಲ್ಲಿ ಸುಮಾರು 19 ಲಕ್ಷ ಅಕ್ರಮ ವಲಸಿಗರು ಕಂಡುಬಂದಿದ್ದಾರೆ. ಈ ಗದ್ದಲ ಇಂದಿಗೂ ನಡೆಯುತ್ತಲೇ ಇದೆ.