ಜೈಪುರ್:ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)ಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ವಧುವಿನ ಪೋಷಕರು 11 ಲಕ್ಷ ರೂ ವರದಕ್ಷಿಣೆ ನೀಡಲು ಒಪ್ಪಿಕೊಂಡಿದ್ದರೂ ಮದುವೆ ದಿನ ಆತ ಕೇವಲ 11 ರೂಪಾಯಿ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾನೆ.
ನವೆಂಬರ್ 8ರಂದು ಜೈಪುರದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ವರ ಜಿತೇಂದ್ರ ಸಿಂಗ್ಗೆ ವಧುವಿನ ತಂದೆ ಒಂದು ತಟ್ಟೆಯಲ್ಲಿ 11 ಲಕ್ಷ ರೂ ವರದಕ್ಷಿಣೆ ರೂಪದಲ್ಲಿ ನೀಡಲು ಮುಂದಾಗುತ್ತಾರೆ. ಈ ವೇಳೆ, ಹಣ ತೆಗೆದುಕೊಳ್ಳಲು ನಿರಾಕರಿಸಿದ ವರ ಕೇವಲ 11 ರೂಪಾಯಿ ಹಾಗೂ ಒಂದು ತೆಂಗಿನ ಕಾಯಿ ಮಾತ್ರ ಪಡೆದುಕೊಳ್ಳುತ್ತಾನೆ!
ವರನ ಮಾತು ಕೇಳಿ!
ನನ್ನ ಪತ್ನಿ ರಾಜಸ್ಥಾನ ನ್ಯಾಯಾಂಗ ಸೇವೆಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಒಂದ್ವೇಳೆ ಆಕೆ ಮ್ಯಾಜಿಸ್ಟ್ರೇಟ್ ಆದರೆ ಅವರು ನೀಡುವ ಹಣಕ್ಕಿಂತ ನನ್ನ ಕುಟುಂಬದ ಮೌಲ್ಯ ಹೆಚ್ಚುತ್ತದೆ ಎಂದುಜಿತೇಂದ್ರ ಸಿಂಗ್ ಹೇಳಿದ್ದಾರೆ. ಈ ಮಾತು ಕೇಳಿರುವ ವಧುವಿನ ತಂದೆಯ ಆನಂದಭಾಷ್ಪ ಹರಿದುಬಂದಿದೆ.
ಇಷ್ಟೇ ಅಲ್ಲ, ಸ್ನಾತಕೋತ್ತರ ಪದವೀಧರೆಯಾಗಿರುವ ಜಿತೇಂದ್ರ ಸಿಂಗ್ ಅವರ ಪತ್ನಿ ಇದೀಗ ಡಾಕ್ಟರೇಟ್ ಓದುತ್ತಿದ್ದು, ಅವಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸುವುದಾಗಿ ಹೇಳಿರುವ ಗಂಡ ಹೃದಯ ವೈಶಾಲ್ಯತೆ ಮೆರೆದಿದ್ದಾನೆ.
ವಧುವಿನ ತಂದೆ ಪ್ರತಿಕ್ರಿಯಿಸಿ, ಹಣ ಪಡೆದುಕೊಳ್ಳಲು ಹಿಂದೇಟು ಹಾಕಿದಾಗ ನನಗೆ ಗೊಂದಲವಾಯಿತು. ವರನ ಕುಟುಂಬಸ್ಥರು ವಿವಾಹದಿಂದಾಗಿ ಸಂತೋಷಗೊಂಡಿಲ್ಲ ಎಂದು ಭಾವಿಸಿದ್ದೆ. ಆದರೆ ಅವರು ವರದಕ್ಷಿಣೆ ವಿರುದ್ಧವಾಗಿರುವುದು ಕೇಳಿ ತುಂಬಾ ಆನಂದವಾಯ್ತು ಎಂದಿದ್ದಾರೆ.