ಕೋವಿಡ್-19 ಬಿಕ್ಕಟ್ಟಿನಿಂದ ದೇಶಾದ್ಯಂತ ಆರೋಗ್ಯ, ಸಾಮಾಜಿಕ ಮತ್ತು ನ್ಯಾಯಾಂಗ ವ್ಯವಸ್ಥೆಗಳ ಕಾರ್ಯನಿರ್ವಣೆಯಲ್ಲಿ ಸಾಕಷ್ಟು ಅಡ್ಡಿ ಆತಂಕಗಳು ಉಂಟಾಗಿವೆ. ಹೀಗಾಗಿ ಸರಕಾರ, ಉದ್ಯಮ, ನ್ಯಾಯದಾನ ವ್ಯವಸ್ಥೆ, ವ್ಯವಹಾರ ಮುಂತಾದ ಕ್ಷೇತ್ರಗಳು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುನ್ನಡೆಯುವುದು ಅನಿವಾರ್ಯವಾಗಿದೆ.
ವಿಶೇಷವಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಕುರಿತಂತೆ ಭಾರತೀಯ ಉದ್ಯಮ ಒಕ್ಕೂಟ (CII - Confederation of Indian Industry)ವು "ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆ" ಎಂಬ ಸಮಗ್ರ ವರದಿಯೊಂದನ್ನು ಸಿದ್ಧಪಡಿಸಿದೆ. ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯ ಮೂಲಕ ನ್ಯಾಯದಾನ ನೀಡುವ ನಿಟ್ಟಿನಲ್ಲಿ ಪ್ರಸ್ತುತ ಕೆಲ ಕಾಯ್ದೆಗಳಿಗೆ ಮಾರ್ಪಾಟು ತರುವ ಬಗ್ಗೆ ವರದಿಯಲ್ಲಿ ಹೇಳಲಾಗಿದೆ. ವರದಿಯಲ್ಲಿ ತಿಳಿಸಲಾಗಿರುವ ಪ್ರಮುಖ ಅಂಶಗಳು ಹೀಗಿವೆ:
(1) ನ್ಯಾಯಾಂಗದಲ್ಲಿ ತಂತ್ರಜ್ಞಾನ ಅಳವಡಿಕೆ ಕುರಿತು ಜಾಗತಿಕ ಮಟ್ಟದ ಪ್ರಯತ್ನಗಳು (2) ಆನ್ಲೈನ್ ಮೂಲಕ ರಾಜಿ ಸಂಧಾನ (3) ನಾಗರಿಕ ವ್ಯಾಜ್ಯಗಳನ್ನು ಇ-ಫೈಲಿಂಗ್ ಮೂಲಕ ದಾಖಲಿಸುವುದು, ಆನ್ಲೈನ್ ಮೂಲಕವೇ ಸಾಕ್ಷಿಗಳ ವಿಚಾರಣೆ ಹಾಗೂ ಕೊನೆಯ ಹಂತದ ವಾದ ವಿವಾದಗಳು ಆನ್ಲೈನ್ ಮೂಲಕವೇ ನಡೆಸುವುದು (4) ಇ-ಕೋರ್ಟ್ಗಳ ಸ್ಥಾಪನೆಗೆ ಅನುಸರಿಸಬೇಕಾದ ಮಾರ್ಗಸೂಚಿಗಳು.