ಕೋಲ್ಕತ್ತಾ (ಪ. ಬಂಗಾಳ):ಪಶ್ಚಿಮ ಬಂಗಾಳದ ತಿತಾಘರ್‌ನಲ್ಲಿ ಹತ್ಯೆಗೀಡಾದ ಬಿಜೆಪಿ ನಾಯಕ, ಸ್ಥಳೀಯ ಕೌನ್ಸಿಲರ್ ಮನೀಶ್ ಶುಕ್ಲಾ ಪ್ರಕರಣದ ತನಿಖೆ ಬಿರುಸಿನಿಂದ ಸಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಐಡಿ ಮತ್ತೆ 10 ಜನರನ್ನು ಹೆಸರಿಸಿ ಬರಾಕ್‌ಪೋರ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ರಾಜ್ಯ ತನಿಖಾ ಸಂಸ್ಥೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಇಬ್ಬರು ತೃಣಮೂಲ ಕಾಂಗ್ರೆಸ್ ಮುಖಂಡರು ಸೇರಿದಂತೆ ಒಟ್ಟು 12 ಮಂದಿಯನ್ನು ಹೆಸರಿಸಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಸಂಸದ ಅರುಣ್ ಸಿಂಗ್ ಅವರ ಆಪ್ತರಾಗಿದ್ದ ಮನೀಶ್ ಶುಕ್ಲಾ ಎಂಬುವರನ್ನು ಕಳೆದ ವರ್ಷದ ಅಕ್ಟೋಬರ್ 4 ರಂದು ಕೊಲೆಗೈಯ್ಯಲಾಗಿತ್ತು. ಈಗಾಗಲೇ ಶುಕ್ಲಾ ಹತ್ಯೆಯಾಗಿ 87 ದಿನಗಳು ಪೂರೈಸಿದ್ದು, ಈವರೆಗೆ 10 ಜನರನ್ನು ಸಿಐಡಿ ಬಂಧಿಸಿದೆ.
ಇನ್ನು ಹತ್ಯೆಗೆ ಸಂಬಂಧಿಸಿದಂತೆ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಪೊಲೀಸ್ ಠಾಣೆ ಬಳಿ ಶುಕ್ಲಾ ತಮ್ಮ ವಾಹನ ನಿಲ್ಲಿಸಿಕೊಂಡು ನಿಂತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಶುಕ್ಲಾ ಅವರ ಮೇಲೆ 5 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.