ಹೈದರಾಬಾದ್:ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹೊಸ ಲುಕ್ನಲ್ಲಿರುವ ಭಾವಚಿತ್ರವೊಂದನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ.
ತಲೆ ಬೋಳಿಸಿಕೊಂಡಂತಿರುವ ಚಿತ್ರವನ್ನು ಹಂಚಿಕೊಂಡಿರುವ ಅವರು, ಅರ್ಬನ್ ಮೋಂಕ್ (ನಗರ ಸನ್ಯಾಸಿ) ಮತ್ತು ಕೆನ್ ಐ ಥಿಂಕ್ ಲೈಕ್ ಎ ಮೋಂಕ್..? (ನಾನು ಸನ್ಯಾಸಿಯಂತೆ ಯೋಚಿಸಬಲ್ಲನೇ..?) ಎಂದು ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿರಂಜೀವಿ ಪುತ್ರ, ಮೆಗಾ ಪವರ್ಸ್ಟಾರ್ ರಾಮ್ ಚರಣ್, ಅಪ್ಪ ನಾನು ನೋಡುತ್ತಿರುವುದು ನಿಜವಾ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು ಬಾಸ್ ಅಂದ್ರೆ ಯಾವಾಗಲೂ ಬಾಸ್ ಎಂದು ಕಮೆಂಟ್ ಮಾಡಿದ್ದಾರೆ.
ಸದ್ಯಕ್ಕೆ ಈ ಪೋಸ್ಟ್ಅನ್ನು ವಿಶ್ಲೇಷಣೆ ಮಾಡಿರುವ ಕೆಲವು ಸಿನಿ ಪ್ರಿಯರು, ಇದು ಹೊಸ ಸಿನಿಮಾಗೆ ಹೊಸ ಲುಕ್ ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಸುಮ್ಮನೆ ಇದ್ದಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿಯವರೆಗೆ ಚಿರಂಜೀವಿ ಹೊಸ ಲುಕ್ಗೆ ಕಾರಣವೇನೆಂಬುದು ಬಹಿರಂಗವಾಗಿಲ್ಲ.