ಪಾಟ್ನಾ:ಬಿಹಾರದಲ್ಲಿ ವಿಧಾಸಭಾ ಚುನಾವಣೆ ಕಾವು ರಂಗೇರಿದ್ದು, ಈ ಸಲದ ಎಲೆಕ್ಷನ್ನಲ್ಲಿ ಲೋಕ ಜನಶಕ್ತಿ ಪಾರ್ಟಿ(ಎಲ್ಜೆಪಿ) ಬಿಜೆಪಿ ಮೈತ್ರಿಯಿಂದ ಹೊರಬಂದು ಏಕಾಂಗಿಯಾಗಿ ಹೋರಾಟ ಮಾಡಲು ನಿರ್ಧರಿಸಿದೆ.
ಇದೇ ವಿಚಾರವಾಗಿ ಭಾರತೀಯ ಜನತಾ ಪಾರ್ಟಿ ಅನೇಕ ಮುಖಂಡರು ಎಲ್ಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಯಾವುದೇ ಕಾರಣಕ್ಕೂ ಪ್ರಧಾನಿ ನರೇಂದ್ರ ಮೋದಿ ಹೆಸರು ಬಳಕೆ ಮಾಡದಂತೆ ವಾರ್ನ್ ಮಾಡಿದ್ದಾರೆ.
ಇದೀಗ ಇದೇ ವಿಚಾರವಾಗಿ ಮಾತನಾಡಿರುವ ಚಿರಾಗ್ ಪಾಸ್ವಾನ್, ನನಗೆ ಮೋದಿಯವರ ಫೋಟೊ ಅಗತ್ಯವಿಲ್ಲ. ಅವರ ಭಾವಚಿತ್ರ ಕೈಯಲ್ಲಿ ಹಿಡಿದು ನಾನು ಚುನಾವಣೆ ಎದುರಿಸುತ್ತಿಲ್ಲ. ಪ್ರಧಾನಿ ಅವರು ನನ್ನ ಹೃದಯದಲ್ಲಿದ್ದಾರೆ. ನಾನು ಅವರಿಗೆ ಹನುಮನಿದ್ದಂತೆ. ನೀವು ನನ್ನ ಎದೆ ಸೀಳಿ ನೋಡಿದ್ರೆ ಅವರು ಕಾಣಸಿಗುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ, ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ಸರ್ಕಾರ ರಚನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿರುವ ಚಿರಾಗ್ ಪಾಸ್ವಾನ್, ನಾವು ಜೆಡಿಯು ಹೊರಹಾಕುತ್ತೇವೆ ಎಂದಿದ್ದಾರೆ. ಮೋದಿಯವರಿಗೆ ನಾನು ಯಾವತ್ತು ಮೋಸ ಮಾಡಿಲ್ಲ ಎಂದು ಚಿರಾಗ್ ಹೇಳಿದ್ದಾರೆ.
ಬಿಹಾರದಲ್ಲಿ 243 ಕ್ಷೇತ್ರಗಳಲ್ಲಿ ಮೂರು ಹಂತದ ಚುನಾವಣೆ ನಡೆಯಲಿದ್ದು, 122 ಜೆಡಿಯು ಹಾಗೂ 121 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿದೆ.