ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (PLA) ಅರುಣಾಚಲ ಪ್ರದೇಶದ ನಾಚರ್, ಅಪ್ಪರ್ ಸುಬನ್ಸಿರಿಯಿಂದ ಐವರು ಬಾಲಕರನ್ನು ಅಪಹರಿಸಿದೆ ಎಂದು ಕಾಂಗ್ರೆಸ್ ಶಾಸಕ ನಿನೊಂಗ್ ಎರಿಂಗ್ ಆರೋಪಿಸಿದ್ದಾರೆ.
ರಷ್ಯಾದ ಮಾಸ್ಕೋದಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದ ರಕ್ಷಣಾ ಮಂತ್ರಿ ಭೇಟಿ ಮಾಡಿ ಗಡಿ ವಿವಾದ ಇತ್ಯರ್ಥಪಡಿಸುವ ಸಂದರ್ಭ ಇದು ಸಂಭವಿಸಿದೆ. ಪಿಎಲ್‌ಎ ಕ್ರಮವು ತುಂಬಾ ತಪ್ಪು ಸಂದೇಶ ರವಾನಿಸಿದಂತಿದೆ ಎಂದು ಕಾಂಗ್ರೆಸ್ ಶಾಸಕ ಹೇಳಿದ್ದಾರೆ.
ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾ ರಕ್ಷಣಾ ಮಂತ್ರಿ ವೀ ಫೆಂಗ್ ರಷ್ಯಾದ ರಾಜಧಾನಿಯಲ್ಲಿ ನಿನ್ನೆ ರಾತ್ರಿ ಭೇಟಿಯಾಗಿ ಉಭಯ ರಾಷ್ಟ್ರಗಳ ಗಡಿ ಉದ್ವಿಗ್ನತೆ ಬಗ್ಗೆ ಚರ್ಚಿಸಿದ್ದು, ಮಾತುಕತೆ ಮೂಲಕ ಉಲ್ಬಣಗೊಂಡ ಪರಿಸ್ಥಿತಿ ತಿಳಿಯಾಗಿಸಲು ಒಪ್ಪಿಗೆ ನೀಡಿದ್ದರು. ಇದರ ಬೆನ್ನಲ್ಲೇ ಇಂತಹ ಗಂಭೀರ ಆರೋಪವನ್ನು ಕಾಂಗ್ರೆಸ್ ಶಾಸಕ ಮಾಡಿದ್ದಾರೆ.
ಈ ಹಿಂದೆ ಎರಿಂಗ್, ಕೊರೊನಾ ವೈರಸ್ ಮೊದಲು ಹುಟ್ಟಿದ್ದು ಚೀನಾದಲ್ಲಿ. ಆ ದೇಶದ ಮೇಲೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜೈವಿಕ ಯುದ್ಧ ಪ್ರಕರಣ ದಾಖಲಿಸಿ ಪರಿಹಾರಕ್ಕಾಗಿ ಆಗ್ರಹಿಸಿದ್ದರು.
ಚೀನಾದಿಂದ 22 ಬಿಲಿಯನ್ ಶತಕೋಟಿ ಡಾಲರ್ ಪರಿಹಾರಕ್ಕಾಗಿ ಚೀನಾವನ್ನು ಆಗ್ರಹಿಸುವಂತೆ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್‌ಗೆ ಪತ್ರ ಬರೆದಿದ್ದರು.