ನವದೆಹಲಿ: ಪೂರ್ವ ಲಡಾಖ್‌ನ ಪಾಂಗೊಂಗ್ ತ್ಸೋ ಸರೋವರದ ಸುತ್ತಲೂ ಹಾಗೂ ಉಭಯ ದೇಶಗಳ ನಡುವಣ ವಾಸ್ತವಿಕ ನಿಯಂತ್ರಣ ರೇಖೆ ಬಳಿ, ಭಾರತೀಯ ಭೂಪ್ರದೇಶವನ್ನು ಅತಿಕ್ರಮಣ ನಡೆಸಲು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡೆಸಿದ ಹೊಸ ತಂತ್ರ, ಪ್ರಯತ್ನಗಳನ್ನು ತಪ್ಪಿಸುವ ಸಂಬಂಧ ಭಾರತೀಯ ಸೇನೆ ಸೋಮವಾರ ನೀಡಿದ ಹೇಳಿಕೆಗೆ ಚೀನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಈ ನಡುವೆ, ಭಾರತದ ವಿದೇಶಾಂಗ ಸಚಿವಾಲಯ ಚೀನಾದ ಆಕ್ರಮಣಕಾರಿ ನೀತಿ, ಗಡಿಯಲ್ಲಿ ಶಾಂತಿ ಹಾಗೂ ಸುಭದ್ರತೆ ಕಾಪಾಡುವ ಸಂಬಂಧ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಒಪ್ಪಂದಗಳು ಹಾಗು ವಾಸ್ತವ ನಿಯಂತ್ರಣ ರೇಖೆಯ ಬಳಿ ಪಾಲಿಸಬೇಕಾದ ಶಿಷ್ಟಾಚಾರಗಳ ಸ್ಪಷ್ಟ ಉಲ್ಲಂಘನೆ ಎಂದು ಬಣ್ಣಿಸಿದೆ.
ಈ ಸಂಬಂಧ ಹೇಳಿಕೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಆಗಸ್ಟ್ 29-30ರ ತಡರಾತ್ರಿ ಚೀನಾ ಸೇನೆ ಪ್ಯಾಂಗೊಂಗ್ ಸರೋವರದ ದಕ್ಷಿಣ ದಂಡೆ ಪ್ರದೇಶದಲ್ಲಿ ಈಗ ಜಾರಿಯಲ್ಲಿರುವ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನದ ಭಾಗವಾಗಿ ಪ್ರಚೋದನಕಾರಿ ಯುದ್ಧ ತಂತ್ರಗಳಲ್ಲಿ ತೊಡಗಿತ್ತು ಎಂದು ತಿಳಿಸಿದ್ದಾರೆ.
"ನಿನ್ನೆ ಭಾರತೀಯ ಸೇನೆಯವರು ನೀಡಿದ ಮಾಹಿತಿಯಂತೆ, ಚೀನಾ ಸೈನ್ಯದ ಈ ಪ್ರಚೋದನಕಾರಿ ಸೈನಿಕ ಕ್ರಮಗಳಿಗೆ ಭಾರತೀಯ ಕಡೆಯವರು ಪ್ರತಿಕ್ರಿಯಿಸಿದ್ದಾರೆ. ಭಾರತದ ಭೌಗೋಳಿಕ ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ದೇಶದ ಹಿತಾಸಕ್ತಿಗಳಿಗೆ ಪೂರಕವಾಗಿ, ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸೇನೆ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ" ಎಂದು ಅವರು ತಿಳಿಸಿದರು.
ಇದರ ಜೊತೆಗೆ ಆಗಸ್ಟ್ 31 ರಂದು, ಉಭಯ ದೇಶಗಳ ಸ್ಥಳೀಯ ಅಧಿಕಾರಿಗಳು ಈ ಸ್ಥಳದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು, ಮಾತುಕತೆಯಲ್ಲಿ ತೊಡಗಿದ್ದಾಗಲೂ, ಚೀನಾ ಸೇನೆ ಪದೇ ಪದೇ ಪ್ರಚೋದನಕಾರಿ ರೀತಿಯಲ್ಲಿ ವರ್ತಿಸುತ್ತಿದ್ದವು. ಆದರೆ ಸಮಯೋಚಿತವಾಗಿ ಭಾರತದ ಸೇನೆಯು ರಕ್ಷಣಾತ್ಮಕ ನಿರ್ಧಾರ ತೆಗೆದುಕೊಂಡಿದ್ದರಿಂದ, ವಾಸ್ತವ ನಿಯಂತ್ರಣ ರೇಖೆಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಹುನ್ನಾರ ತಪ್ಪಿಸಲು ಸಾಧ್ಯವಾಯಿತು.
ನವದೆಹಲಿಯ ಚೀನಾ ರಾಯಭಾರ ಕಚೇರಿಯ ವಕ್ತಾರ ಜಿ ರೋಂಗ್, ಈ ಮೊದಲು ಭಾರತ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದರು. “ಈ ಹಿಂದಿನ ಬಹು ಹಂತದ ಮಾತುಕತೆಗಳಲ್ಲಿ ಹಾಗೂ ಒಪ್ಪಂದಗಳಲ್ಲಿ ಉಭಯ ದೇಶಗಳ ನಡುವೆ ಬರಲಾದ ಸರ್ವಾನುಮತದ ಸಮ್ಮತಿಯ ನಿರ್ಧಾರಕ್ಕೆ ವಿರುದ್ಧವಾಗಿ, ಭಾರತದ ಸೇನೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಭಾರತದ ಸೇನೆ, ಅಕ್ರಮವಾಗಿ ವಾಸ್ತವ ನಿಯಂತ್ರಣ ರೇಖೆ ದಾಟಿವೆ. ಮತ್ತೆ ಅಕ್ರಮವಾಗಿ ಪಾಂಗೊಂಗ್ ತ್ಸೋ ಸರೋವರದ ದಕ್ಷಿಣ ದಂಡೆಯನ್ನು ಮತ್ತು ಚೀನಾ-ಭಾರತ ಗಡಿಯ ಪಶ್ಚಿಮ ವಲಯದ ರೆಕಿನ್ ಪಾಸನ್ನು ಅತಿಕ್ರಮಿಸಿದೆ. ಈ ಮೂಲಕ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸುತ್ತಿದೆ," ಎಂದು ಅವರು ಆರೋಪಿಸಿದ್ದಾರೆ.
"ಭಾರತದ ಈ ಕ್ರಮವು ಚೀನಾದ ಭೌಗೋಳಿಕ ಸಾರ್ವಭೌಮತ್ವವನ್ನು ಆಕ್ರಮಿಸಿದೆ. ಗಡಿಗೆ ಸಂಬಂಧಿಸಿ ಉಭಯ ದೇಶಗಳ ನಡುವಣ, ನಾನಾ ಒಪ್ಪಂದಗಳು, ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಜೊತೆಗೆ ಗಡಿ ವಿವಾದಕ್ಕೆ ಸಂಬಂಧಿಸಿ, ಉಭಯ ದೇಶಗಳ ನಡುವಣ ಏರ್ಪಟ್ಟಿದ್ದ ಒಮ್ಮತವನ್ನು ಹಾಳುಗೆಡವಿದೆ. ಇದು, ಗಡಿಯಲ್ಲಿ ಶಾಂತಿ ಹಾಗೂ ಸ್ಥಿರತೆಗೆ ಧಕ್ಕೆ ಉಂಟುಮಾಡಿದೆ. ಈಗ ಭಾರತದ ಸೇನೆ ಕೈಗೊಂಡಿರುವ ನಿರ್ಧಾರ, ಉಭಯ ದೇಶಗಳು ಗಡಿಯಲ್ಲಿ ಶಾಂತಿ ಕಾಪಾಡಲು ಹಾಗೂ ಉಭಯ ದೇಶಗಳ ನಡುವಣ ಉದ್ವಿಗ್ನತೆ ಕಡಿಮೆಗೊಳಿಸಲು ಕಳೆದ ಕೆಲವು ವರ್ಷಗಳಿಂದ ಮಾಡಲಾದ ಪ್ರಯತ್ನಗಳನ್ನು ನಿರರ್ಥಕಗೊಳಿಸಿದೆ. ಚೀನಾ ಇದನ್ನು ಬಲವಾಗಿ ಖಂಡಿಸುತ್ತದೆ," ಎಂದು ಅವರು ತಿಳಿಸಿದ್ದರು.
ಈ ನಡುವೆ ಭಾರತೀಯ ಸೇನೆ, ಚೀನಾದ ಆರೋಪಗಳನ್ನು ಸೋಮವಾರ ನೀಡಿದ ಹೇಳಿಕೆ ಮೂಲಕ ತಳ್ಳಿ ಹಾಕಿದೆ. ಚೀನಾ ಪಡೆಗಳು, ಲಡಾಖ್‌ನ ಪೂರ್ವ ಭಾಗಕ್ಕೆ ಸಂಬಂಧಿಸಿ ಉಭಯ ದೇಶಗಳ ನಡುವೆ ಈ ಹಿಂದೆ ನಡೆಸಿದ ಸೇನಾ ಮಟ್ಟದ ಹಾಗೂ ರಾಜತಾಂತ್ರಿಕ ಮಾತುಕತೆಗಳಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳನ್ನು ಉಲ್ಲಂಘಿಸಿವೆ ಹಾಗೂ ಎರಡು ದೇಶಗಳು ಒಮ್ಮತದಿಂದ ಒಪ್ಪಿಕೊಂಡಿದ್ದ ಯಥಾಸ್ಥಿತಿಯಲ್ಲಿ ಬದಲಾವಣೆ ತರಲು ಪ್ರಚೋದನಕಾರಿಯಾಗಿ ವರ್ತಿಸುತ್ತಿವೆ ಎಂದು ಭಾರತೀಯ ಸೇನೆ ಆರೋಪಿಸುತ್ತಿದೆ.
"ಪಾಂಗೊಂಗ್ ತ್ಸೋ ಸರೋವರದ ದಕ್ಷಿಣ ದಂಡೆಯಲ್ಲಿ ಚೀನಾ ಪಡೆಗಳ ಆಕ್ರಮಣಕಾರಿ, ಪ್ರಚೋದನಕಾರಿ ಚಟುವಟಿಕೆಗಳನ್ನು ಭಾರತ ಸೇನೆ, ಮುನ್ನೆಚ್ಚರಿಕೆಯ ಕ್ರಮವಾಗಿ ತಪ್ಪಿಸಿದವು. ಜೊತೆಗೆ ಇಲ್ಲಿನ ಭೌಗೋಳಿಕ ನಕ್ಷೆಯನ್ನು ಬದಲಾಯಿಸುವ ಚೀನಾದ ಏಕಪಕ್ಷೀಯ, ಅಕ್ರಮ ಉದ್ದೇಶವನ್ನು ತಪ್ಪಿಸಿ, ಭಾರತದ ಭೂ ಪ್ರದೇಶಗಳನ್ನು ರಕ್ಷಿಸುವ ಉದ್ದೇಶದಿಂದ, ಸ್ಥಳೀಯವಾಗಿ ನಾನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ," ಎಂದು ಸೇನೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. "ಭಾರತೀಯ ಸೈನ್ಯವು ಮಾತುಕತೆ ಮೂಲಕ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಬದ್ಧವಾಗಿದೆ. ಜೊತೆಗೆ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಕೂಡ ಬದ್ಧವಾಗಿದೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತ ಹಾಗೂ ಚೀನಾ ಗಡಿಯಲ್ಲಿ ಈ ಭಾರಿ ದೊಡ್ಡ ಮಟ್ಟದ ಉದ್ವಿಗ್ನತೆ ಕಾಣಿಸಿಕೊಂಡಿದೆ. ಲಡಾಖ್ನಲ್ಲಿ ಉಭಯ ದೇಶಗಳ ನಡುವಣ ಮೂಡಿದ್ದ ಒಮ್ಮತ ಹಾಗೂ ಶಾಂತಿ ಕದಡುವ ಮೂಲಕ ಹೊಸ ಉದ್ವಿಗ್ನತೆಯನ್ನು ಚೀನಾ ಸೃಷ್ಟಿಸಿದೆ. ಈ ಹಿಂದೆ, ಜೂನ್ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಉಭಯ ಪಡೆಗಳ ನಡುವೆ ರಕ್ತಸಿಕ್ತ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಉಭಯ ದೇಶಗಳ ಪಡೆಗಳಲ್ಲೂ ಜೀವ ಹಾನಿ ಸಂಭವಿಸಿತ್ತು. ಇದು ಕಳೆದ 45 ವರ್ಷಗಳಲ್ಲಿ ವಾಸ್ತವ ನಿಯಂತ್ರಣ ರೇಖೆ ಬಳಿ ಸಂಭವಿಸಿದ ಮೊದಲ ಜೀವ ಹಾನಿ. ಮಂಗಳವಾರ ಬೀಜಿಂಗ್ನಲ್ಲಿ ಚೀನಾ ದೇಶದ ವಿದೇಶಾಂಗ ಸಚಿವಾಲಯ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಭಾರತದ ಸೇನೆ ವಿರುದ್ಧ ತೀವ್ರ ತೆರನಾದ ಆರೋಪ ಮಾಡಿದ್ದರು. ಭಾರತೀಯ ಸೇನಾ ಪಡೆಗಳು ಪಾಂಗೊಂಗ್ ತ್ಸೋ ಸರೋವರದ ದಕ್ಷಿಣದ ದಂಡೆಯಲ್ಲಿ ಮತ್ತು ರೆಕಿನ್ ಪರ್ವತದಲ್ಲಿ ವಾಸ್ತವ ನಿಯಂತ್ರಣ ರೇಖೆ ಮೀರಿ ಅತಿಕ್ರಮಿಸಿವೆ ಎಂಬ ಆರೋಪ ಮಾಡಿದ್ದರು. ಚೀನಾದ ವಿದೇಶಾಂಗ ಸಚಿವಾಲಯ ದಿನ ನಿತ್ಯದ ಪತ್ರಿಕಾಗೋಷ್ಠಿ ಇದಾಗಿತ್ತು.
"ನಾವು, ಭಾರತ ಸೇನೆ ತನ್ನ ಆಕ್ರಮಣಕಾರಿ ಪ್ರಚೋದನಾತ್ಮಕ ಕೆಲಸಗಳನ್ನು ನಿಲ್ಲಿಸಬೇಕೆಂದು ಎಂದು ಒತ್ತಾಯಿಸುತ್ತೇವೆ. ಜೊತೆಗೆ, ವಾಸ್ತವ ನಿಯಂತ್ರಣ ರೇಖೆ ಬಳಿ ಸೇನೆ ತನ್ನ ಅತಿಕ್ರಮಣ ಹಿಂತೆಗೆದುಕೊಳ್ಳಬೇಕು. ಗಡಿಯಲ್ಲಿ ಉದ್ವಿಗ್ನತೆ ಉಲ್ಬಣಿಸುವ ಯಾವುದೇ ಕೆಲಸಕ್ಕೆ ಭಾರತ ಕೈ ಹಾಕಬಾರದು," ಎಂದು ಅವರು ಆಗ್ರಹಿಸಿದ್ದರು. ಈ ನಡುವೆ, ಚೀನಾದ ಸರಕಾರಿ ಮಾಧ್ಯಮ, ದೇಶದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಗ್ಲೋಬಲ್ ಟೈಮ್ಸ್ ದಿನ ಪತ್ರಿಕೆ, ತನ್ನ ಮಂಗಳವಾರದ ಆವೃತಿಯಲ್ಲಿ ಭಾರತದ ವಿರುದ್ಧ ಕೆಂಡಕಾರಿತ್ತು. ಭಾರತದ ಅವಕಾಶವಾದಿ, ಆಕ್ರಮಣಕಾರಿ ನೀತಿಯನ್ನು ಚೀನಾ ದೃಢವಾಗಿ ಎದುರಿಸಬೇಕು ಎಂದು ಅದು ತನ್ನ ಸಂಪಾದಕೀಯದ ಶೀರ್ಷಿಕೆ ಮೂಲಕ ಸರ್ಕಾರವನ್ನು ಆಗ್ರಹಿಸಿತ್ತು.
ಪತ್ರಿಕೆ ತನ್ನ ಸಂಪಾದಕೀಯದಲ್ಲಿ, ಭಾರತದ ಸೇನೆಯು ಚೀನಾದ ಭೌಗೋಳಿಕ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಮತ್ತು ಪ್ರಚೋದನಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ಉಂಟು ಮಾಡಿದೆ ಎಂದು ಆರೋಪಿಸಿತ್ತು. ಚೀನಾ, ತನ್ನ ಗಡಿ ರಕ್ಷಿಸಿಕೊಳ್ಳಲು ಸೇನಾ ಉಪಕ್ರಮಗಳಿಗೆ ಮುಂದಾಗಬೇಕು ಎಂದು ಈ ಸಂಪಾದಕೀಯದಲ್ಲಿ ಆಗ್ರಹಿಸಲಾಗಿದೆ. ಜೊತೆಗೆ, ಉಭಯ ದೇಶಗಳು ಪರಸ್ಪರ ಮಾತುಕತೆ ಮೂಲಕ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಅದು ಪ್ರತಿಪಾದಿಸಿದೆ. “ಆದರೆ ಭಾರತ ಪ್ರಚೋದನಾತ್ಮಕವಾಗಿ, ಮನಸೋ ಇಚ್ಛೇ ಸೇನಾ ನಿರ್ಧಾರಗಳ ಮೂಲಕ ಚೀನಾದ ಸಾರ್ವಭೌಮತೆಯನ್ನೇ ಪ್ರಶ್ನಿಸಿದಾಗ, ಚೀನಾ ಮೃದು ನೀತಿ ಅನುಸರಿಸಬಾರದು. ಅನಿವಾರ್ಯವಾದರೆ, ಅದು ಸೇನಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ತನ್ನ ಗೆಲುವನ್ನು ಖಾತರಿ ಪಡಿಸಿಕೊಳ್ಳಬೇಕು," ಎಂದು ಸಂಪಾದಕೀಯದಲ್ಲಿ ಅಭಿಪ್ರಾಯ ಪಡಲಾಗಿದೆ.
ಈ ಸಂಪಾದಕೀಯದಲ್ಲಿ, ಚೀನಾ ಭಾರತಕ್ಕಿಂತ ಹಲವು ಪಟ್ಟು ಪ್ರಬಲವಾಗಿದ್ದು, ಯಾವುದೇ ರೀತಿಯಲ್ಲಿ ಅದು ಚೀನಾಕ್ಕೆ ಸಮನಾಗಿಲ್ಲ ಎಂದು ಒತ್ತಿ ಹೇಳಲಾಗಿದೆ. ಅಮೆರಿಕದಂತಹ ದೇಶಗಳ ಜೊತೆಗೆ ಕೈಜೋಡಿಸಿ, ಚೀನಾವನ್ನು ಮಣಿಸಬಲ್ಲೆವು ಎಂಬ ಭಾರತದ ಭ್ರಮೆಗಳನ್ನು ನಾಶಗೊಳಿಸಬೇಕು. ಏಷ್ಯಾ ಖಂಡದ ಹಾಗೂ ವಿಶ್ವದ ಇತಿಹಾಸವು ನಮಗೆ ತಿಳಿಸುವುದೇನೆಂದರೆ, ಅವಕಾಶವಾದಿ ಶಕ್ತಿಗಳು ದುರ್ಬಲರನ್ನು ಪೀಡಿಸುತ್ತವೆ. ಆದರೆ ಬಲಿಷ್ಠರಿಗೆ ಭಯಪಡುತ್ತವೆ. ಚೀನಾ-ಭಾರತ ಗಡಿ ವಿಷಯಕ್ಕೆ ಬಂದಾಗ ಭಾರತವು ಇಂತಹ ಒಂದು ಅವಕಾಶವಾದಿ ರಾಷ್ಟ್ರ ಎಂದು ಅದು ಬಣ್ಣಿಸಿದೆ.
ಈ ನಡುವೆ, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಶ್ರೀವಾಸ್ತವ ಅವರು, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅವರ ಚೀನಾದ ಸಹವರ್ತಿ ವಾಂಗ್ ಯಿ ಮತ್ತು ಎರಡೂ ಕಡೆಯ ವಿಶೇಷ ಪ್ರತಿನಿಧಿಗಳು ಪರಿಸ್ಥಿತಿಯನ್ನು ಜವಾಬ್ದಾರಿಯುತವಾಗಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಒಪ್ಪಿದ್ದಾರೆ. ಗಡಿಯಲ್ಲಿ ಶಾಂತಿ ಹಾಗೂ ಸ್ಥಿರತೆಗೆ ಧಕ್ಕೆ ತರಬಲ್ಲ ಯಾವುದೇ ಪ್ರಚೋದನಾತ್ಮಕ ಕ್ರಮ ತೆಗೆದುಕೊಳ್ಳಬಾರದು ಎಂದು ನಿರ್ಧರಿಸಲಾಗಿದೆ. ದ್ವಿಪಕ್ಷೀಯ ಒಪ್ಪಂದಗಳು ಮತ್ತು ವಾಸ್ತವ ನಿಯಂತ್ರಣ ರೇಖೆಯ ಶಿಷ್ಟಾಚಾರ ಮೂಲಕ ಪರಿಸ್ಥಿತಿ ನಿಭಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವರ್ಷದ ಮೊದಲಿನಿಂದಲೂ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ಕ್ರಮಗಳು ಮತ್ತು ನಡವಳಿಕೆಗಳು ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವ ಸಂಬಂಧ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದ್ದ ನಿರ್ಧಾರಗಳು ಹಾಗೂ ಶಿಷ್ಟಾಚಾರಕ್ಕೆ ವಿರುದ್ಧವಾಗಿವೆ. ಚೀನಾ, ಒಪ್ಪಂದ ಮತ್ತು ಶಿಷ್ಟಾಚಾರಗಳನ್ನು ಉಲ್ಲಂಘಿಸಿದೆ ಎಂದು ಅವರು ತಿಳಿಸಿದರು.
"ಚೀನಾ ಸೇನೆಯ ಇಂತಹ ನಡವಳಿಕೆಗಳು, ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ಮತ್ತು ವಿಶೇಷ ಪ್ರತಿನಿಧಿಗಳ ನಡುವೆ ಮಾತುಕತೆ ಬಳಿಕ ತಲುಪಿದ ತಿಳುವಳಿಕೆ ಹಾಗೂ ನಿರ್ಧಾರಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ. ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ, ಗಡಿಯಲ್ಲಿ ಚೀನಾ ಸೇನೆಯ ಇತ್ತೀಚಿನ ಪ್ರಚೋದನಕಾರಿ ಮತ್ತು ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿದೆ. ಗಡಿಯಲ್ಲಿ ಇಂತಹ ಪ್ರಚೋದನಕಾರಿ ಕ್ರಮಗಳನ್ನು ಕೈಬಿಟ್ಟು, ತನ್ನ ಸೇನೆಯ ಮುಂಚೂಣಿ ಸೈನಿಕರು ಶಿಸ್ತು ಪಾಲಿಸುವಂತೆ ನಿರ್ದೇಶಿಸಬೇಕು ಎಂದು ಭಾರತ ಚೀನಾವನ್ನು ಆಗ್ರಹಿಸಿದೆ," ಎಂದು ಅವರು ತಿಳಿಸಿದ್ದಾರೆ.
ಭಾರತ- ಚೀನಾ ಪಶ್ಚಿಮ ಭಾಗದಲ್ಲಿ, ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ಭವಿಸಿರುವ ಸಮಸ್ಯೆಗಳನ್ನು ಶಾಂತಿ ಮಾತುಕತೆ ಮೂಲಕ ಬಗೆಹರಿಸಲು ಭಾರತ ಬದ್ಧವಾಗಿದೆ.
"ಇಂತಹ ಸನ್ನಿವೇಶದಲ್ಲಿ, ಚೀನಾ ಸೇನೆ ಭಾರತ ಜೊತೆಗೆ ಈ ಹಿಂದೆ ತಲುಪಿದ ತಿಳುವಳಿಕೆಯನ್ನು, ಮಾಡಿಕೊಂಡ ಒಪ್ಪಂದಗಳನ್ನು ಪ್ರಾಮಾಣಿಕವಾಗಿ ಪಾಲಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಹಾಗೂ ಅಪೇಕ್ಷಿಸುತ್ತೇವೆ. ಗಡಿಯಲ್ಲಿ ಶಾಂತಿ ಹಾಗೂ ಸ್ಥಿರತೆ ಮರುಸ್ಥಾಪಿಸಲು ಚೀನಾ ಭಾರತ ಜೊತೆಗೆ ಕೆಲಸ ಮಾಡುತ್ತದೆ ಎಂದು ನಾವು ಅಪೇಕ್ಷಿಸುತ್ತೇವೆ," ಎಂದು ಅವರು ತಿಳಿಸಿದ್ದಾರೆ.