ನವದೆಹಲಿ:ಕೇಂದ್ರ ಸರ್ಕಾರ 43 ಚೀನಾದ ಮೊಬೈಲ್ ಆ್ಯಪ್ಗಳನ್ನು ಬ್ಯಾನ್ ಮಾಡಿದ ಬೆನ್ನಲ್ಲೇ, ಭಾರತವು ಸಾಮಾನ್ಯ ವ್ಯಾಪಾರ ಸಂಬಂಧವನ್ನು ಮುಂದುವರೆಸಬೇಕೆಂದು ಚೀನಾ ಮನವಿ ಮಾಡಿದೆ.
ಈ ಬಗ್ಗೆ ಚೀನಾ ರಾಯಭಾರ ಕಚೇರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. 'ಚೀನಾ ಮತ್ತು ಭಾರತ ಎರಡೂ ದೇಶಗಳು ಅಭಿವೃದ್ಧಿಗಾಗಿ ಅವಕಾಶಗಳನ್ನು ಹೊಂದಿವೆ. ಈ ಅವಕಾಶಗಳು ಪರಸ್ಪರ ಬೆದರಿಕೆಗಳಿಗಿಂತ ಅತ್ಯಂತ ಮುಖ್ಯ. ಎರಡೂ ರಾಷ್ಟ್ರಗಳು ತಮ್ಮ ವ್ಯಾಪಾರ ಮತ್ತು ವಾಣಿಜ್ಯವನ್ನು ಮೊದಲಿನಂತೆ ಕಾಪಾಡಿಕೊಳ್ಳಬೇಕಿದೆ' ಎಂದಿದೆ.
ವ್ಯಾಪಾರವನ್ನು ಸುಸ್ಥಿತಿಗೆ ತರುವುದರ ಮೂಲಕ ಉಭಯ ರಾಷ್ಟ್ರಗಳು ಲಾಭ ಹೊಂದಬಹುದಾಗಿದೆ. ಎರಡೂ ರಾಷ್ಟ್ರಗಳು ಗೆಲ್ಲಬಹುದಾಗಿದ್ದು, ಸರಿಯಾದ ಮಾರ್ಗದಲ್ಲಿ ಹೊರಡಬಹುದಾಗಿದೆ ಎಂದು ನವದೆಹಲಿಯ ಚೀನಾ ರಾಯಭಾರ ಕಚೇರಿ ಹೇಳಿದೆ.
ರಾಯಭಾರ ಕಚೇರಿಯ ವಕ್ತಾರ ಜಿ ರೊಂಗ್, ಭಾರತವು ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ತಾರತಮ್ಯವಿಲ್ಲದ ವ್ಯಾಪಾರ ವಾತಾವರಣವನ್ನು ಒದಗಿಸುತ್ತದೆ ಮತ್ತು ಡಬ್ಲ್ಯೂಟಿಒ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಆಶಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.