ಹೈದರಾಬಾದ್:ಲಡಾಖ್ನ ಗಾಲ್ವಾನ ವ್ಯಾಲಿ ಪ್ರದೇಶದಲ್ಲಿ ಭಾರತ - ಚೀನಾ ನಡುವಿನ ಸಂಘರ್ಷದ ವೇಳೆ ನಾವು ಯಾವುದೇ ಭಾರತೀಯ ಯೋಧರ ಬಂಧನ ಮಾಡಿಲ್ಲ ಎಂದ ಚೀನಾ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.
ಭಾರತದ ಯಾವುದೇ ಯೋಧರನ್ನ ಬಂಧನ ಮಾಡಿಲ್ಲ: ಚೀನಾ ವಿದೇಶಾಂಗ ಇಲಾಖೆ ಸ್ಪಷ್ಟನೆ
ಪೂರ್ವ ಲಡಾಖ್ನ ಗಾಲ್ವಾನ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದ ವೇಳೆ ನಾವು ಯಾವುದೇ ಭಾರತೀಯ ಯೋಧರನ್ನ ವಶಕ್ಕೆ ಪಡೆದುಕೊಂಡಿಲ್ಲ ಎಂದು ಚೀನಾ ಸ್ಪಷ್ಟನೆ ನೀಡಿದೆ.
ಸೋಮವಾರ ರಾತ್ರಿ ನಡೆದ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಈ ವೇಳೆ ಭಾರತೀಯ ಕೆಲ ಯೋಧರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಕೂಡ ಕೆಲವೊಂದು ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ, ಈ ವಿಷಯಕ್ಕೆ ನಿನ್ನೆ ಸ್ಪಷ್ಟನೆ ನೀಡಿದ್ದ ಭಾರತೀಯ ಸೇನೆ, ನಮ್ಮ ಯಾವುದೇ ಯೋಧರು ಕಣ್ಮರೆಯಾಗಿಲ್ಲ ಎಂದಿತು. ಇದರ ಬೆನ್ನಲ್ಲೇ ಚೀನಾ - ಭಾರತದ ನಡುವಿನ ಮಾತುಕತೆ ಬಳಿಕ ನಾಲ್ವರು ಸೇನಾಧಿಕಾರಿಗಳು ಸೇರಿದಂತೆ 10 ಮಂದಿ ಯೋಧರನ್ನ ಚೀನಾ ರಿಲೀಸ್ ಮಾಡಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.
ಇದೆಲ್ಲದರ ನಡುವೆ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿಜಿಯಾನ್, ನಾವು ಭಾರತದ ಯಾವುದೇ ಯೋಧರ ಬಂಧನ ಮಾಡಿಲ್ಲ ಎಂದಿದ್ದು, ಗಾಲ್ವಾನ ವ್ಯಾಲಿಯಲ್ಲಿ ನಡೆದಿರುವ ಸಂಘರ್ಷದ ಬಗ್ಗೆ ಸರಿ - ತಪ್ಪು ಯಾವುದು ಎಂಬುದು ಬಹಳ ಸ್ಪಷ್ಟವಾಗಿದೆ. ಈ ವಿಷಯದಲ್ಲಿ ಭಾರತ ಸಂಪೂರ್ಣವಾಗಿ ಸುಳ್ಳು ಹೇಳುತ್ತಿದ್ದು, ಪರಿಸ್ಥಿತಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಉಭಯ ದೇಶಗಳು ಮಾತುಕತೆ ನಡೆಸಿದ್ದು, ಭಾರತದಲ್ಲಿ ಚೀನಾ ಉತ್ಪನ್ನ ಬಹಿಷ್ಕರಿಸುವ ಕುರಿತು ಇಲ್ಲಿಯವರೆಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.