ಕರ್ನಾಟಕ

karnataka

ETV Bharat / bharat

ಮೋದಿ ಯೋಗ ಮ್ಯಾಟ್, ಕೊಹ್ಲಿ ಟೀ-ಶರ್ಟ್‌.. ಚೀನಾದ OPPO ಜತೆ ಬಿಸಿಸಿಐ ₹ 1079 ಕೋಟಿ ಡೀಲ್‌..! - ಚೀನಾ ಮೊಬೈಲ್‌

ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಅನ್ನೋದು ಬಹಳ ಹಿಂದಿನ ದಿನದ ಮಾತು. ಆದ್ರೂ ಅವುಗಳ ಬ್ಯಾನ್ ಮಾಡಲು ಆಗುತ್ತಿಲ್ಲ. ಕಾರಣ ಏನು ಅನ್ನೋದನ್ನು ಇಲ್ಲಿ ಹೇಳಲಾಗಿದೆ.

ನಿಜವಾಗಿಯೂ ಚೀನಾ ವಸ್ತುಗಳ ಬಹಿಷ್ಕಾರ ಸಾಧ್ಯವಾ

By

Published : Mar 16, 2019, 6:32 PM IST

ನವದೆಹಲಿ: ಚೀನಾ ಮೊಬೈಲ್‌ನ ಕೈಯಲ್ಲಿ ಹಿಡಿದು ಚೀನಾ ವಸ್ತುಬಹಿಷ್ಕರಿಸಿ ಅಂತ ಫೇಸ್‌ಬುಕ್‌, ಟ್ವಿಟರ್‌, ವ್ಯಾಟ್ಸ್‌ಆ್ಯಪ್‌ನಲ್ಲಿ ಬರೆದುಕೊಳ್ಳುವ ಮಹಾಶಯರನ್ನೇ ನಾವೀಗ ಕಣ್ಣಾರೆ ಕಾಣುತ್ತಿದ್ದೇವೆ. ಸೋಷಿಯಲ್‌ ಮೀಡಿಯಾದಲ್ಲಿ ಈಗ ಇಂಥವರ ಸಂಖ್ಯೆಯೇ ಹೆಚ್ಚುತ್ತಿದೆ. ಚೀನಾ ವಸ್ತುಗಳನ್ನ ಬ್ಯಾನ್ ಮಾಡೋದು ಅಷ್ಟು ಸಲೀಸಲ್ಲ. ಯಾಕೆ ಅಂತ ನೀವೇ ನೋಡಿ.

ಭಾರತದ ರಾಷ್ಟ್ರೀಯ ಭದ್ರತೆಗೆ ಚೀನಾ ಅಡ್ಡಗಾಲು :

ಜೆಇಎಂ ಚೀಫ್‌ ಮೌಲಾನಾ ಮಸೂದ್‌ ಅಜರ್‌ನ ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವಕ್ಕೆ UNSCಯಲ್ಲಿ 4ನೇ ಬಾರಿ ಚೀನಾ ಅಡ್ಡಗಾಲು ಹಾಕಿದೆ. ವೀಟೊ ಪವರ್‌ ಬಳಸಿ ಚೀನಾ ಅಜರ್‌ ಬೆನ್ನಿಗೆ ನಿಂತಿದೆ. ಇಡೀ ವಿಶ್ವದ ಮುಂದೆ ಜೆಇಎಂ ಚೀಫ್‌ನ ಉಗ್ರ ಕೃತ್ಯ ಬಯಲಾಗಿವೆ. ಇಷ್ಟಿದ್ದರೂ ಚೀನಾ ಆತನ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕಂತೆ. ಭಾರತದ ಮುಂದಿನ ರಾಜತಾಂತ್ರಿಕ ಕ್ರಮ ಏನಾಗಿರುತ್ತೋ ನೋಡಬೇಕು. ಆದರೆ, ಈಗ ಮತ್ತೊಮ್ಮೆ ಭಾರತೀಯರು ಚೀನಾ ವಸ್ತುಗಳನ್ನ ಬಹಿಷ್ಕರಿಸುವ ಬಗ್ಗೆ ಅಭಿಯಾನ ನಡೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ boycott Chinese goods ಎಂಬ ಅಭಿಯಾನ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಚೀನಾ ರಾಷ್ಟ್ರಾಧ್ಯಕ್ಷ ಕ್ಸಿ ಜಿನ್‌ಪಿನ್​ ಜತೆ ಒಳ್ಳೇ ಸಂಬಂಧಕ್ಕೆ ಯತ್ನಿಸಿದ್ದರು. ಆದರೂ ಚೀನಿ ಚಿಲ್ಲರೆ ಬುದ್ಧಿ ಮಾತ್ರ ಬಿಡಲೇ ಇಲ್ಲ. ಹಾಗಾಗಿ ಈಗ ಭಾರತೀಯರ ಚೀನಾ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಚೀನಾ ವಸ್ತುಗಳನ್ನ ಬ್ಯಾನ್ ಮಾಡುವ ಬಗ್ಗೆ ಮಾತು ಕೇಳಿ ಬರುತ್ತಿವೆ.

ಬ್ಯಾನ್ ಮಾಡಿ ಅನ್ನೋರ ಕೈಯಲ್ಲೇ ಚೀನಾ ಮೊಬೈಲ್‌ :

ಚೀನಾ ವಸ್ತು ಬ್ಯಾನ್‌ ಮಾಡಿ, ಬಹಿಷ್ಕರಿಸಿ ಅಂತ ಮಾತಾಡುವವರ ಕೈಯಲ್ಲೇ ಚೀನಾ ಮೊಬೈಲ್‌ ಫೋನ್‌ ಇರುತ್ತವೆ. ಅದೇ ಮೊಬೈಲ್‌ನಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಬ್ಯಾನ್‌ ಚೀನಿ ಗೂಡ್ಸ್‌ ಅಂತ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ತಾರೆ. ಇದು ವಾಸ್ತವ. ಆದರೆ, ಹಾಕುವ ಬ್ರಾಂಡೆಡ್‌ ಶೂ, ಬಟ್ಟೆಗಳು ಹಾಗೂ ಇಲೆಕ್ಟ್ರಾನಿಕ್ ವಸ್ತುಗಳೆಲ್ಲ ಚೀನಾದಿಂದಲೇ ಬಂದಿವೆ ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ. 2015ರಲ್ಲಿ ಮೊದಲ ಬಾರಿಗೆ ದೆಹಲಿಯ ರಾಜಪಥದಲ್ಲಿ ಮೋದಿ ಯೋಗ ಮಾಡಲು ಹಾಕಲಾಗಿದ್ದ ಯೋಗ ಮ್ಯಾಟ್‌ಗಳು ಸಹ ಚೀನಾ ಪ್ರೊಡೆಕ್ಟ್‌. ಅವತ್ತು 37 ಸಾವಿರ ಯೋಗ ಮ್ಯಾಟ್‌ಗಳನ್ನ ಕೇಂದ್ರದ ಆಯುಷ್ ಇಲಾಖೆ ₹ 92 ಲಕ್ಷ ವೆಚ್ಚ ಮಾಡಿ ತರಿಸಿತ್ತು. ರಾಜ್ಯಸಭೆಯಲ್ಲಿ ಕೇಂದ್ರವೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿತ್ತು.

ಸೈನಿಕರು ಹಾಕ್ತಾರೆ ಚೀನಾ ಬುಲೆಟ್‌ ಪ್ರೂಫ್‌ ಜಾಕೆಟ್‌:

ನಿಜ ಸಂಗತಿ ಕಣ್ರೀ. ಭಾರತೀಯ ಸೈನಿಕರಿಗೆ ಈಗ ನೀಡಲಾಗುತ್ತಿರುವ ಬುಲೆಟ್‌ ಪ್ರೂಫ್‌ ಜಾಕೆಟ್‌ಗಳು ಕೂಡ ಚೀನಾದಿಂದಲೇ ಆಮದಾಗುತ್ತಿವೆ. ನೀವು ಕ್ರಿಕೆಟ್‌ ಪ್ರೇಮಿಗಳಲ್ವಾ.. ಹಾಗಾದ್ರೇ ಮೊನ್ನೆ ಆಸೀಸ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭಾರತೀಯ ಸೇನೆಯ ಕ್ಯಾಪ್‌ ಧರಿಸಿ ಮೈದಾನಕ್ಕಿಳಿದು ಸೆಂಚುರಿ ಭಾರಿಸಿದಾಗ, ದೇಶಕ್ಕೆ ದೇಶವೇ ಹೆಮ್ಮೆಪಟ್ಟಿತ್ತಲ್ಲವೇ. ಆ ಸೇನಾ ಕ್ಯಾಪ್‌ ಕೂಡ ನೆರೆಯ ಚೀನಾ ದೇಶದ ಪ್ರೊಡೆಕ್ಟ್‌ ಅನ್ನೋದನ್ನ ಮರೆಯಬಾರದು.

ಚೀನಾದ OPPO ಜತೆ BCCI ₹ 1079 ಕೋಟಿ ಒಪ್ಪಂದ :

ಟೀಂ ಇಂಡಿಯಾ ಪ್ಲೇಯರ್ಸ್‌ ಬ್ಲ್ಯೂ ಜರ್ಸಿ ಮೇಲೆ ದೊಡ್ಡದಾಗಿ OPPO ಅಂತ ಬರೆದಿರ್ತಾರಲ್ವಾ. OPPO ಅನ್ನೋ ಮೊಬೈಲ್ ಕಂಪನಿ ಚೀನಾ ದೇಶದ್ದಾಗಿದೆ. ಇದೇ OPPO ಭಾರತ ಕ್ರಿಕೆಟ್‌ ತಂಡದ ಆಫೀಸಿಯಲ್‌ ಸ್ಪಾನ್ಸರ್ಸ್‌. ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ಚೀನಾ OPPO ಕಂಪನಿ 1079 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. OPPO ಟೀಂ ಇಂಡಿಯಾದ ಆಫೀಸಿಯಲ್‌ ಕಿಟ್‌ ಸ್ಪಾನ್ಸರ್ಸ್‌ ಕೂಡ ಹೌದು. ಆದರೂ ನಾವು ಬ್ಯಾನ್‌ ಚೀನಿ ಗೂಡ್ಸ್‌ ಅಂತ ಈಸಿಯಾಗಿ ಬರೆದುಕೊಳ್ತೇವೆ. ಈಗ ನೀವೇ ನಿರ್ಧರಿಸಿ, ನಿಜವಾಗಿಯೂ ಚೀನಾ ವಸ್ತುಗಳ ಬಹಿಷ್ಕಾರ ಸಾಧ್ಯವಾ..

ABOUT THE AUTHOR

...view details