ನವದೆಹಲಿ: ಲಡಾಖ್ನ ಗಾಲ್ವನ್ ಕಣಿವೆ ಸಂಘರ್ಷದ ನಂತರ ಗಡಿ ವಾಸ್ತವ ರೇಖೆ ಬಳಿ ಚೀನಾ ಬರೋಬ್ಬರಿ 20 ಸಾವಿರ ಯೋಧರ ನಿಯೋಜನೆ ಮಾಡಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಸದ್ಯ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಕಾರಣ ಈಸ್ಟರ್ನ್ ಲಡಾಖ್ ಸೆಕ್ಟರ್ನಲ್ಲೇ 10ರಿಂದ 12 ಸಾವಿರ ಯೋಧರ ನಿಯೋಜಿಸಿದೆ. ಜತೆಗೆ ಹೆಚ್ಚು ವೇಗವಾಗಿ ಚಲಿಸುವ ವಾಹನ ಮತ್ತು ಶಸ್ತ್ರಾಸ್ತ್ರ ಕೂಡ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದೇ ವಿಷಯವಾಗಿ ಮಾತನಾಡಿರುವ ಭಾರತೀಯ ಸೇನೆ, ಚೀನಾ ಸೇನೆಯ ಚಲನವಲನ ಹಾಗೂ ಭಾರತೀಯ ಭೂಪ್ರದೇಶದ ಸಮೀಪ ನಿಯೋಜನೆ ಮಾಡಿರುವ ಸೈನಿಕರ ಮೇಲೆ ನಿಗಾ ಇಟ್ಟಿದ್ದೇವೆ ಎಂದು ತಿಳಿಸಿದೆ.
ಗಡಿ ಸಂಘರ್ಷದ ವಿಚಾರವಾಗಿ ಭಾರತ-ಚೀನಾ ಮಧ್ಯೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ನಡೆಯುತ್ತಿದ್ದರೂ, ಇಲ್ಲಿಯವರೆಗೆ ಯಾವುದೇ ರೀತಿಯ ಫಲಿತಾಂಶ ಹೊರಬಿದ್ದಿಲ್ಲ. ಎರಡು ವಿಭಾಗಗಳಲ್ಲಿ ಚೀನಾ ಸೇನೆ ನಿಯೋಜನೆ ಮಾಡಿದ್ದು, ಯುದ್ಧ ಟ್ಯಾಂಕರ್ಗಳು ಕೂಡ ಇದರಲ್ಲಿವೆ ಎಂದು ತಿಳಿದು ಬಂದಿದೆ.