ರಾಂಚಿ :ಕೊರೊನಾ ಹಿನ್ನೆಲೆ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾದರೂ ಸದ್ಯಕ್ಕೆ ಯಾವುದೇ ಶಾಲಾ- ಕಾಲೇಜು ತೆರೆಯಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ಆನ್ಲೈನ್ ತರಗತಿ ವ್ಯವಸ್ಥೆಗಳನ್ನು ಏರ್ಪಡಿಸಿದೆ. ಆದರೆ, ನಮ್ಮ ದೇಶ ಹೆಚ್ಚು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವುದರಿಂದ ಹಳ್ಳಿ ಮಕ್ಕಳಿಗೆ ಆನ್ಲೈನ್ ಪಾಠವನ್ನು ತಲುಪಿಸುವುದು ಸವಾಲಿನ ಕೆಲಸ. ಗ್ರಾಮೀಣ ಭಾಗದ ಹೆಚ್ಚಿನ ಮನೆಗಳಲ್ಲಿ ಆಂಡ್ರಾಯ್ಡ್ ಫೋನ್ (ಸ್ಮಾರ್ಟ್ ಪೋನ್) ಸೌಲಭ್ಯವಿಲ್ಲ. ಹೀಗಾಗಿ ಮಕ್ಕಳು ಈ ಆನ್ಲೈನ್ ಪಾಠದಿಂದ ವಂಚಿತರಾಗುತ್ತಿದ್ದಾರೆ.
ಬುಕಟ್ಟು ಜನಾಗಂದವರೇ ಹೆಚ್ಚಾಗಿ ಇರುವ ಜಾರ್ಖಂಡ್ನ ರಾಂಚಿಯ ಕುಗ್ರಾಮ ನಮ್ಕುಮ್ ಎಂಬಲ್ಲಿಯೂ ಇದೇ ಪರಿಸ್ಥಿತಿ ಇದೆ. ಇಲ್ಲಿನ ಶಾಲೆಯ ಮಕ್ಕಳಿಗೆ ಆನ್ಲೈನ್ ಪಾಠ ಕೇಳಲು ಆಂಡ್ರಾಯ್ಡ್ ಪೋನ್ ಇಲ್ಲ. ಹಾಗಾಗಿ ವಿನೂತನ ಉಪಾಯ ಮಾಡಿರುವ ಶಿಕ್ಷಕ ಶ್ಯಾಮ್ ಸುಂದರ್, ಹಳ್ಳಿಯ ಮಕ್ಕಳಿಗೆ ಧ್ವನಿ ವರ್ಧಕದ ಮೂಲಕ ಪಾಠ ಮಾಡುತ್ತಿದ್ದಾರೆ.