ಮುಂಗೇಲಿ(ಛತ್ತೀಸ್ಗಢ): ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಮೇಲೆ ಅತ್ಯಾಚಾರವೆಸಗಲು ಬಂದ ಕಾಮುಕನೊಬ್ಬ ಆಕೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ಛತ್ತೀಸ್ಗಢದ ಮುಂಗೇಲಿಯಲ್ಲಿ ನಡೆದಿದೆ.
ಅತ್ಯಾಚಾರ ಎಸಗಲು ಬಂದಾಗ ವಿರೋಧಿಸಿದ ಬಾಲಕಿಗೆ ಬೆಂಕಿ ಹಚ್ಚಿ ಕೊಂದ ಕಾಮುಕ!
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಲು ಮುಂದಾದ ಕಾಮುಕನೊಬ್ಬ ಆಕೆ ವಿರೋಧಿಸಿದ್ದರಿಂದ ಕೋಪಗೊಂಡು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಜೂನ್ 30ರಂದು ಈ ಘಟನೆ ನಡೆದಿದ್ದು, ಮುಂಗೇಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಬಾಲಕಿ ಒಬ್ಬಳೇ ಇರುವುದನ್ನ ನೋಡಿ ಮನೆಯೊಳಗೆ ನುಗ್ಗಿದ್ದಾನೆ. ಈ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದಾನೆ. ಇದಕ್ಕೆ ಬಾಲಕಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಕಾಮುಕ ವ್ಯಕ್ತಿ ಸೀಮೆಎಣ್ಣೆ ಸುರಿದು ಬಾಲಕಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ವೇಳೆ, ಚೀರಾಡುತ್ತಾ ಆಕೆ ಮನೆಯಿಂದ ಹೊರ ಬಂದಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಹೀಗೆ ಕೃತ್ಯ ಎಸಗಿದ್ದ ಕಾಮುಕ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತೇಜ್ರಾಮ್ ಪಟೇಲ್ ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನ 30 ವರ್ಷದ ಬಬ್ಲು ಬಾಸ್ಕರ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾನೆ. ವ್ಯಕ್ತಿಯ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 302(ಮರ್ಡರ್), 506 (ಕ್ರೈಂ) ಹಾಗೂ 354 (ಲೈಂಗಿಕ ಕಿರುಕುಳ) ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.