ಕಾವರ್ಧಾ (ಛತ್ತೀಸ್ಗಢ): ಒಂದೆಡೆ ಕೋವಿಡ್ ಇನ್ನೊಂದೆಡೆ ಈಗ ಮಿಡತೆಗಳ ಭಯ ರೈತರ ಜೀವನಕ್ಕೆ ಕಂಟಕತಂದಿದೆ. ಈ ಹಿನ್ನೆಲೆ ಮಿಡತೆಗಳನ್ನು ಎದುರಿಸಿ ಓಡಿಸಲು ಛತ್ತೀಸ್ಗಢ ರೈತರು ನೂತನ ಪ್ಲಾನ್ ಒಂದನ್ನು ಮಾಡಿದ್ದಾರೆ.
ಕೀಟನಾಶಕಗಳ ಜೊತೆಗೆ ಡಿಜೆ ಬಾಕ್ಸ್ಗಳನ್ನು ಜಮೀನಿನಲ್ಲಿ ಅಳವಡಿಸಲಾಗಿದ್ದು ಅದರ ಶಬ್ಧಕ್ಕೆ ಹೆದರಿ ಮಿಡತೆಗಳು ಹೆದರಿ ಓಡಿಹೋಗುವ ಭರವಸೆ ಹೊಂದಿದ್ದಾರೆ. ಮಿಡತೆಯ ಹಿಂಡುಗಳು ದಾಳಿ ಇಡುವುದನ್ನು ತಡೆಯಲು ಇಲ್ಲಿನ ಸರ್ಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.
ಮಿಡತೆಗಳು ನಂದಗಾಂವ್ ಮೂಲಕ ರಾಜ್ಯವನ್ನು ಪ್ರವೇಶಿಸಿ ಕಾವರ್ಧಾ ಜಿಲ್ಲೆಯ ಲೋಹರಾದ ಗಡಿ ಪ್ರದೇಶಕ್ಕೆ ಬರಬಹುದು ಎಂದು ಊಹಿಸಲಾಗಿದೆ. ಅಂತೆಯೇ , ಕೃಷಿ ಇಲಾಖೆ ಮತ್ತು ಮಧ್ಯಪ್ರದೇಶ, ಮಹಾರಾಷ್ಟ್ರದ ಗಡಿಯಲ್ಲಿರುವ ಜಿಲ್ಲೆಗಳ ರೈತರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ.
ರಾತ್ರಿಯಲ್ಲಿ ಮಿಡತೆಗಳು ಏನಾದರೂ ದಾಳಿ ಇಟ್ಟರೆ ಅವುಗಳನ್ನು ಓಡಿಸಲು ಕೀಟನಾಶಕಗಳನ್ನು ಸಿಂಪಡಿಸಲಾಗುವುದು. ಇದಕ್ಕಾಗಿ ಅಗ್ನಿಶಾಮಕ ದಳವನ್ನು ಸಹ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಾಕಷ್ಟು ಕೀಟನಾಶಕಗಳ ದಾಸ್ತಾನು ಇಡಲು ಕೃಷಿ ಕೇಂದ್ರಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನು ರೈತರಿಗೂ ಕೂಡ ಎಚ್ಚರಿಕೆ ನೀಡಿದ್ದು, ಬೆಳೆಗಳಿಗೆ ಕೀಟನಾಶಕ ಸಿಂಪಡಿಸುವಂತೆ ಹಾಗೆಯೇ ಡಿಜೆ ಸೌಂಡ್ ಬಾಕ್ಸ್ ಹಾಕುವಂತೆ ತಿಳಿಸಿದ್ದಾರೆ.
ನಿನ್ನೆ ಈ ಸಂಬಂಧ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಭೆ ನಡೆಸಿ, ಮುಂದಿನ 15 ದಿನಗಳಲ್ಲಿ 15 ಜನ ಔಷಧ ಸಿಂಪಡಿಸುವವರು ಬ್ರಿಟನ್‌ನಿಂದ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಪಾಕಿಸ್ತಾನದಿಂದ ಮಿಡತೆಗಳ ಹಿಂಡು ರಾಜಸ್ಥಾನ, ಪಂಜಾಬ್, ಹರಿಯಾಣ, ಮತ್ತು ಮಧ್ಯಪ್ರದೇಶವನ್ನು ಪ್ರವೇಶಿಸಿ ಹತ್ತಿ ಹಾಗೂ ತರಕಾರಿ ಬೆಳೆ ನಾಶಮಾಡಿವೆ.