ಚೆನ್ನೈ (ತಮಿಳುನಾಡು):ಚೆನ್ನೈ ನಗರದಲ್ಲಿರುವ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್ನಲ್ಲಿ ಅಲ್ಲಿನ ಸಿಬ್ಬಂದಿ ಸೇರಿದಂತೆ ಸುಮಾರು 85 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 15ರಿಂದ ಸುಮಾರು 609 ಮಂದಿಗೆ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ 85 ಮಂದಿಗೆ ಸೋಂಕು ದೃಢಪಟ್ಟಿದೆ. ಹೋಟೆಲ್ನಲ್ಲಿನ ಎಲ್ಲಾ ಅತಿಥಿಗಳ ತಪಾಸಣೆ ನಡೆಸಬೇಕೆಂದು ಗ್ರೇಟರ್ ಚೆನ್ನೈ ನಿಗಮಕ್ಕೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ತಿಳಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಐಟಿಸಿ ಗ್ರ್ಯಾಂಡ್ ಚೋಳ ಪ್ರತಿಕ್ರಿಯೆ ನೀಡಿದ್ದು, ಹೋಟೆಲ್ನಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗಿದೆ. ಸಾಮಾಜಿಕ ಅಂತರ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದಿದೆ.
ಇದನ್ನೂ ಓದಿ:ಕೋವಿಡ್ ಲಸಿಕೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ: ಅಖಿಲೇಶ್ ಹೇಳಿಕೆಗೆ ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ!
ಡಿಸೆಂಬರ್ 15ರಲ್ಲಿ ಹೋಟೆಲ್ನ ಓರ್ವ ಬಾಣಸಿಗನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದಾದ ನಂತರ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೆಲವು ಪ್ರಕರಣಗಳು ಪತ್ತೆಯಾಗಿವೆ. ಡಿಸೆಂಬರ್ 31ರಂದು 16 ಮತ್ತು ಜನವರಿ 1ರಂದು 13 ಸೋಂಕು ಪ್ರಕರಣಗಳು ಕಂಡು ಬಂದಿವೆ.
ಹೋಟೆಲ್ ಸಿಬ್ಬಂದಿ ಮಾತ್ರವಲ್ಲದೇ, ಸಿಬ್ಬಂದಿಯ ಸುತ್ತಮುತ್ತಲಿನ ನಿವಾಸಗಳಲ್ಲೂ ಕೂಡಾ ಕೋವಿಡ್ ಕಂಡುಬಂದಿದೆ. ಬಹುತೇಕ ಮಂದಿಗೆ ಕಡಿಮೆ ರೋಗ ಲಕ್ಷಣಗಳು ಕಂಡುಬಂದಿದ್ದು, ಅವರಿಗೆ ಚಿಕಿತ್ಸೆಯ ನಂತರ ಮನೆಗೆ ಕಳುಹಿಸಲಾಗಿದೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ.
ಈಗಾಗಲೇ ಹೋಟೆಲ್ಗೆ ಬಂದಿದ್ದ ಹಾಗೂ ಅಲ್ಲಿನ ಸಿಬ್ಬಂದಿಗೆ ಸಂಪರ್ಕದಲ್ಲಿರುವ ಎಲ್ಲರಿಗೂ ಕೂಡಾ ಸೋಂಕು ಪರೀಕ್ಷೆಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಚೆನ್ನೈ ನಗರದ ಎಲ್ಲಾ ಹೋಟಲ್ಗಳಲ್ಲಿ ಮುಂಜಾಗ್ರತೆ ವಹಿಸಿಕೊಳ್ಳಲು ಸೂಚನೆ ನೀಡಲಾಗಿದೆ.