ಚೆನ್ನೈ (ತಮಿಳುನಾಡು):ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್‌ಗೆ ಕಡಿವಾಣ ಹಾಕಲು, ತಮಿಳುನಾಡು ಸರಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಹಿನ್ನೆಲೆ ಇಂದು ಚೆನ್ನೈ ನಗರವನ್ನು ಲಾಕ್ಡೌನ್ ಮಾಡಲಾಗಿತ್ತು. ಇಡೀ ನಗರವೂ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು.
ಆಸ್ಪತ್ರೆ ಹಾಗೂ ವೈದ್ಯಕೀಯ ಸೇವೆಗಳನ್ನು ಹೊರತು ಪಡಿಸಿ, ರಸ್ತೆ ಹಾಗೂ ಮೇಲ್ಸೆತುವೆ ಸೇರಿದಂತೆ ಎಲ್ಲಾ ಕಡೆ ಪೊಲೀಸ್ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಪೊಲೀಸ್, ಆರೋಗ್ಯ ಕಾರ್ಯಕರ್ತರು ಹಾಗೂ ಸ್ವಚ್ಛತೆ ಸಿಬ್ಬಂದಿ ಬಿಟ್ಟು ಬೇರೆ ಯಾರು ರಸ್ತೆಗಿಳಿದಿರಲಿಲ್ಲ.
ಇನ್ನು ನಿಯಮ ಉಲ್ಲಂಘನೆ ಕುರಿತಾಗಿ 4,799 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, 7,907 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಚೆನ್ನೈ ಮತ್ತು ಪಕ್ಕದ ಪ್ರದೇಶಗಳನ್ನು ಜೂನ್ 19ರಿಂದ 30ರವರೆಗೆ ಲಾಕ್ಡೌನ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
12 ದಿನಗಳ ಲಾಕ್ಡೌನ್ ಅವಧಿಯಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ನಿಬಂಧನೆಗಳೊಂದಿಗೆ ಅವಕಾಶ ನೀಡಲಾಗಿದ್ದು, ಜೂನ್ 21(ಇಂದು) ಮತ್ತು ಜೂನ್ 28ರ ಭಾನುವಾರ ಪೂರ್ಣಪ್ರಮಾಣದಲ್ಲಿ ಶಟ್ಡೌನ್ ಜಾರಿಯಲ್ಲಿರಲಿದೆ.