ಪಾಟ್ನಾ:ಹೈವೋಲ್ಟೇಜ್ ಬಿಹಾರ ವಿಧಾನಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದ್ದು, ಈ ನಡುವೆ ಪ್ಲೂರಲ್ ಪಾರ್ಟಿಯ ಅಭ್ಯರ್ಥಿಯೊಬ್ಬನ ಮೇಲೆ ಭಾನುವಾರ ಸಂಜೆ ದಾಳಿ ನಡೆದಿದೆ. ಎ.ರಾಮೇಶ್ವರ ಸಿಂಗ್ ದಾಳಿಗೊಳಗಾದ ಅಭ್ಯರ್ಥಿ.
ದಾಳಿಗೊಳಗಾದ ಎ.ರಾಮೇಶ್ವರ ಸಿಂಗ್ ಅವರ ಕಣ್ಣಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಅಪರಿಚಿತ ಹಲ್ಲೆಕೋರರು ರಾಮೇಶ್ವರ ಸಿಂಗ್ ಅವರ ಮುಖಕ್ಕೆ ರಾಸಾಯನಿಕ ಶಾಯಿಯನ್ನು ಎಸೆದು ಪರಾರಿಯಾಗಿದ್ದಾರೆ. ಪರಿಣಾಮ ಅವರ ಬಲಗಣ್ಣು ಗಾಯವಾಗಿದೆ.
ಭಾನುವಾರ ಸಂಜೆ ಚುನಾವಣಾ ಪ್ರಚಾರದಿಂದ ಹಿಂದಿರುಗುತ್ತಿದ್ದಾಗ, ಯಾರೋ ಅಪರಿಚಿತ ಹಲ್ಲೆಕೋರರು ರಾಸಾಯನಿಕ ಶಾಯಿ ಎಸೆದಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. ಅವರನ್ನು ಸಿವಾನ್ ಸದರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಪಕ್ಷದ ಮುಖ್ಯಸ್ಥೆ ಪುಷ್ಪಂ ಪ್ರಿಯಾ ಚೌಧರಿ ಈ ಬಗ್ಗೆ ಟ್ವೀಟ್ ಮಾಡಿ ಘಟನೆ ಖಂಡಿಸಿದ್ದಾರೆ.
ನಮ್ಮ ಅಭ್ಯರ್ಥಿಗಳು ಇಂತಹ ಘಟನೆಗಳಿಂದ ಎಚ್ಚರಿಕೆಯಿಂದಿರಬೇಕೆಂದು ಮನವಿ ಮಾಡಿರುವ ಪುಷ್ಪಂ ಪ್ರಿಯಾ ಚೌಧರಿ, ಸೋಲುವ ಹತಾಶೆಯಿಂದ ಎನ್ಡಿಎ ಮುಖಂಡರು ಈ ರೀತಿಯ ಕೃತ್ಯಕ್ಕೆ ಇಳಿದಿದ್ದಾರೆ. ನಿಯಂತ್ರಣ ಕಳೆದುಕೊಂಡಿರುವ ಎನ್ಡಿಎ ನಾಯಕರು ನಮ್ಮ ಪಕ್ಷದ ಅಭ್ಯರ್ಥಿಗಳ ಮೇಲೆ ಹಲ್ಲೆ ಮಾಡುವ ಮೂಲಕ ತಮ್ಮ ಎಲ್ಲೆಗಳನ್ನು ಮೀರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.