ಕರ್ನಾಟಕ

karnataka

ETV Bharat / bharat

ವಹಿವಾಟಿನ ನೆಪದಲ್ಲಿ ವ್ಯಾಪಾರಿ ವಸಾಹತು ಯೋಜನೆ; ಚೀನಾದ ಅಸಹನೆಗೆ ಕಾರಣವೇನು ಗೊತ್ತೇ? - ವಿದೇಶಿ ನೇರ ಹೂಡಿಕೆ

ಎಫ್‌ಡಿಐ ನೀತಿಗಳು ಡಬ್ಲ್ಯೂಟಿಒ ವ್ಯಾಪ್ತಿಗೆ ಒಳಪಟ್ಟಿಲ್ಲ ಮತ್ತು ಭಾರತದ ಎಫ್‌ಡಿಐ ನೀತಿಯು ಸಂಪೂರ್ಣ ಪಾರದರ್ಶಕವಾಗಿದೆ ಎಂದು ವಿಶ್ವದ ವಿವಿಧೆಡೆಯ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಚೀನಾದ ಅಸಹನೆಯನ್ನು ಇನ್ನಷ್ಟು ಹೆಚ್ಚಿಸಿದೆ. ಸರ್ಕಾರ ಮತ್ತು ಭಾರತದ ನಾಗರಿಕರು ತಮಗೆ ಯಾವುದು ಉತ್ತಮ ಎಂಬುದನ್ನು ನಿರ್ಧರಿಸಬೇಕಿದೆ.

FDI
ವಿದೇಶಿ ನೇರ ಹೂಡಿಕೆ

By

Published : Apr 29, 2020, 12:45 PM IST

ನವದೆಹಲಿ: ಭಾರತ ಇತ್ತೀಚೆಗೆ ತನ್ನ ವಿದೇಶಿ ನೇರ ಹೂಡಿಕೆ ನೀತಿಯಲ್ಲಿ ಮಾಡಿದ ಬದಲಾವಣೆಗಳು ಚೀನಾಗೆ ಮುಖಭಂಗ ಉಂಟು ಮಾಡಿದೆ. ನೆರೆ ದೇಶಗಳಿಂದ ಬರುವ ಎಫ್‌ಡಿಐ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ಬೇಕು ಎಂದು ನೀತಿ ಬದಲಾವಣೆ ಮಾಡಿರುವುದು ಮುಕ್ತ ವ್ಯಾಪಾರದ ನಿಯಮಗಳನ್ನು ಉಲ್ಲಂಘಿಸಿದಂತಾಗಿದೆ.

ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಹೆಚ್‌ಡಿಎಫ್‌ಸಿ ಷೇರುಗಳನ್ನು ಪೀಪಲ್ಸ್ ಬ್ಯಾಂಕ್ ಆಫ್‌ ಚೀನಾ ಖರೀದಿಸುತ್ತಿದ್ದಂತೆಯೇ ಭಾರತ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಷ್ಟಕ್ಕೂ, ಈ ಬದಲಾವಣೆಯು ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಭೂತಾನ್‌ಗೂ ಅನ್ವಯಿಸುತ್ತದೆ. ಭಾರತದ ಕಂಪನಿಗಳ ಮೇಲೆ ಚೀನಾ ತನ್ನ ಹಿಡಿತವನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಈ ನೀತಿ ಅವರಿಗೆ ಬಾಧಿಸಿದೆ. ಭಾರತದ ಪ್ರಮುಖ 18 ಸ್ಟಾರ್ಟಪ್‌ಗಳಲ್ಲಿನ ಹೂಡಿಕೆಯು ಅಂದಾಜು 30,000 ಕೋಟಿ ರೂ. ಎಂದು ಹೇಳಲಾಗಿದೆ. ಬ್ರೂಕಿಂಗ್ಸ್ ಇಂಡಿಯಾ ವರದಿಯ ಪ್ರಕಾರ, ಭಾರತದಲ್ಲಿ ರಿಯಲ್‌ ಎಸ್ಟೇಟ್‌ನಿಂದ ವಾಹನ ಉದ್ಯಮಗಳವರೆಗೆ ವಿವಿಧ ರೀತಿಯ ಕಂಪನಿಗಳಲ್ಲಿ ಚೀನಾದ ಕಂಪನಿಗಳು ಹೂಡಿಕೆ ಮಾಡಿವೆ. ಭಾರತದ 800 ಕಂಪನಿಗಳಲ್ಲಿ ಚೀನಾದ ಕಂಪನಿಗಳು ನೇರ ಹೂಡಿಕೆ ಮಾಡಿವೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸ್ಪೇನ್‌ ಮತ್ತು ಜರ್ಮನಿಯು ಈಗಾಗಲೇ ತಮ್ಮ ಎಫ್‌ಡಿಐ ನೀತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಈ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಮಯದಲ್ಲಿ ಚೀನಾ ಅನುಕೂಲ ಪಡೆಯುವುದನ್ನು ತಡೆದಿವೆ. ಹಲವು ದೇಶಗಳು ತನ್ನ ವ್ಯೂಹವನ್ನು ಬೇಧಿಸಿರುವುದರಿಂದ ಚೀನಾ ಸಹನೆ ಕಳೆದುಕೊಂಡಿದೆ. ಅಷ್ಟೇ ಅಲ್ಲ, ಎಫ್‌ಡಿಐ ನಿಷೇಧವು ತಾರತಮ್ಯದ ಕ್ರಮವಾಗಿದೆ ಎಂದೂ ಹೇಳಿಕೆ ನೀಡಿದೆ.

ಜಾಗತಿಕ ಆರ್ಥಿಕತೆಯು ಕುಸಿಯುತ್ತಿದ್ದರೆ ಕೋವಿಡ್‌-19 ಪರಿಸ್ಥಿತಿಯನ್ನು ಚೀನಾ ಬಳಕೆ ಮಾಡಿಕೊಳ್ಳುತ್ತಿದೆ. ಭಾರಿ ಹಣಕಾಸು ಸಂಪನ್ಮೂಲ ಹೊಂದಿರುವ ಮತ್ತು ರಾಜಕೀಯ ಬೆಂಬಲವನ್ನೂ ಹೊಂದಿರುವ ಚೀನಾದ ಕಂಪನಿಗಳು ಇತರ ದೇಶಗಳಲ್ಲಿ ತಮ್ಮ ಹೂಡಿಕೆಯ ಪಾಲನ್ನು ಹೆಚ್ಚಿಸುತ್ತಿವೆ. ಈ ಹೂಡಿಕೆಯ ಅವಕಾಶವನ್ನು ನಿಯಂತ್ರಿಸಿದ್ದರಿಂದ ಚೀನಾಗೆ ಇರಿಸುಮುರಿಸಾಗಿದೆ. ಚೀನಾ ಹಿಂದಿನಿಂದಲೂ ಸ್ವ ಹಿತಾಸಕ್ತಿಯ ನಿರ್ಧಾರಗಳಿಗೆ ಕುಖ್ಯಾತವಾಗಿದೆ. ಡಬ್ಲ್ಯೂಟಿಒ ಸದಸ್ಯತ್ವವನ್ನು ಪಡೆದು 19 ವರ್ಷಗಳೇ ಕಳೆದರೂ, ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್‌ ಮತ್ತು ಇತರ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಚೀನಾದ ಉತ್ಪನ್ನಗಳ ಕಳಪೆ ಗುಣಮಟ್ಟ ಹೊಂದಿರುವುದು ಮತ್ತು ಶೇ. 70 ರಷ್ಟು ಉತ್ಪನ್ನಗಳು ನಕಲಿಯಾಗಿರುವ ಆರೋಪ ನಿರಂತರವಾಗಿ ಕೇಳಿಬರುತ್ತಿದೆ. ಪಟಾಕಿಗಳಿಂದ ಆಟಿಕೆಗಳವರೆಗೂ ಚೀನಾ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

ನಮ್ಮ ದೇಶೀಯ ಉತ್ಪಾದನೆ ಉದ್ಯಮಕ್ಕೆ ಇದು ಯಾವ ಪರಿಣಾಮವನ್ನು ಹೊಂದಿವೆ? ಸೂಪರ್‌ ಪವರ್ ಆಗುವ ಮಹತ್ವಾಕಾಂಕ್ಷೆಯೊಂದಿಗೆ ಡಬ್ಲ್ಯೂಟಿಒ ನಿಯಮಗಳನ್ನು ಚೀನಾ ನಿರಂತರವಾಗಿ ಉಲ್ಲಂಘಿಸುತ್ತಿದೆ. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಇತರ ದೇಶಗಳು ಎಫ್‌ಡಿಐ ನೀತಿಗಳಲ್ಲಿ ಬದಲಾವಣೆ ಮಾಡಲು ಆರಂಭಿಸಿದಾಗ ಮುಕ್ತ ಮತ್ತು ನೈತಿಕ ವ್ಯಾಪಾರದ ಬಗ್ಗೆ ಪ್ರವಚನ ನೀಡಲು ಆರಂಭಿಸಿದೆ. ಎಫ್‌ಡಿಐ ನೀತಿಗಳು ಡಬ್ಲ್ಯೂಟಿಒ ವ್ಯಾಪ್ತಿಗೆ ಒಳಪಟ್ಟಿಲ್ಲ ಮತ್ತು ಭಾರತದ ಎಫ್‌ಡಿಐ ನೀತಿಯು ಸಂಪೂರ್ಣ ಪಾರದರ್ಶಕವಾಗಿದೆ ಎಂದು ವಿಶ್ವದ ವಿವಿಧೆಡೆಯ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಚೀನಾದ ಅಸಹನೆಯನ್ನು ಇನ್ನಷ್ಟು ಹೆಚ್ಚಿಸಿದೆ. ಸರ್ಕಾರ ಮತ್ತು ಭಾರತದ ನಾಗರಿಕರು ತಮಗೆ ಯಾವುದು ಉತ್ತಮ ಎಂಬುದನ್ನು ನಿರ್ಧರಿಸಬೇಕಿದೆ. ಈ ವಿಚಾರದಲ್ಲಿ ಚೀನಾದ ಮಾತನ್ನು ನಾವು ಕೇಳಬೇಕಿಲ್ಲ. ಇಂತಹ ದ್ವಂದ್ವ ನೀತಿಯನ್ನು ತಳ್ಳಿಹಾಕುವ ಸಮಯ ಇದು.

ABOUT THE AUTHOR

...view details