ಕರ್ನಾಟಕ

karnataka

ETV Bharat / bharat

ನೀವು ದೇಶದ ಹೆಮ್ಮೆ ... ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ನಾಯಕರು

ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳು ಸೇರಿದಂತೆ ದೇಶದ ಜನ ನಿರಾಸೆಗೊಂಡಿದ್ದಾರೆ. ಈ ಯೋಜನೆ ಮೂಲಕ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ವಿಜ್ಞಾನಿಗಳನ್ನು ದೇಶದ ನಾಯಕರು ಹಾಗೂ ಜನ ಶ್ಲಾಘಿಸುತ್ತಿದ್ದಾರೆ.

ಇಸ್ರೋ

By

Published : Sep 7, 2019, 6:19 AM IST

Updated : Sep 7, 2019, 6:31 AM IST

ಬೆಂಗಳೂರು: ಇನ್ನೇನು 2 ಕಿಮೀ ಸಂಚರಿಸಿದ್ರೆ ಚಂದ್ರಯಾನ-2ನ ವಿಕ್ರಂ ಲ್ಯಾಂಡರ್ ಚಂದಿರನ ಅಂಗಳಕ್ಕಿಳಿಯುತ್ತಿತ್ತು. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶವೇ ಕಾಯುತ್ತಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿದೆ. ಇದರಿಂದ ಇಸ್ರೋ ವಿಜ್ಞಾನಿಗಳಲ್ಲಿ ಆತಂಕ ಮನೆ ಮಾಡಿದೆ. ಆದ್ರೆ ವಿಜ್ಞಾನಿಗಳನ್ನು ಹುರುದುಂಬಿಸಲು ದೇಶದ ನಾಯಕರು, ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.

ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿದುಕೊಂಡ ಬಳಿಕ ಇಸ್ರೋ ಕಚೇರಿಯಲ್ಲೇ ಪ್ರಧಾನಿ ಮೋದಿ ಅವರು ಅಧ್ಯಕ್ಷ ಕೆ.ಶಿವನ್ ಬೆನ್ನು ತಟ್ಟಿ, ನಾವು ನಿಮ್ಮ ಜೊತೆ ಇದ್ದೇವೆ. ಹೆದರಬೇಡಿ ಎಂಬ ಅಭಯ ನೀಡಿದ್ದಾರೆ. ಬಳಿಕ ಟ್ವೀಟ್ ಮಾಡಿ. 'ನಮ್ಮ ವಿಜ್ಞಾನಿಗಳು ದೇಶದ ಹೆಮ್ಮೆ! ಅವರು ತಮ್ಮಿಂದಾಗುವ ಅತ್ಯುತ್ತಮವನ್ನು ಕೊಟ್ಟು ಯಾವಾಗಲೂ ದೇಶ ಹೆಮ್ಮೆ ಪಡುವಂತೆ ಮಾಡುತ್ತಾರೆ. ಈ ಸಮಯದಲ್ಲಿ ಧೈರ್ಯವಾಗಿರಬೇಕು' ಎಂದಿದ್ದಾರೆ.

'ಚಂದ್ರಯಾನ-2 ಬಗ್ಗೆ ಇಸ್ರೋದ ಕಾರ್ಯದಿಂದ ಪ್ರತಿ ಭಾರತೀಯ ಕೂಡ ಹೆಮ್ಮೆ ಪಡುವಂತಾಗಿದೆ. ಬದ್ಧ ಹಾಗೂ ಪರಿಶ್ರಮಿ ವಿಜ್ಞಾನಗಳ ಜತೆ ದೇಶ ಯಾವಾಗಲೂ ನಿಲ್ಲುತ್ತದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

'ನಾವು ಇಸ್ರೋ ಜೊತೆಗಿದ್ದೇವೆ. ಬಾಹ್ಯಾಕಾಶದಲ್ಲಿ ನಿಮ್ಮ ಸಾಧನೆಯಿಂದ ದೇಶದ ಯುವ ಮನಸ್ಸುಗಳನ್ನು ಮತ್ತು ಎಲ್ಲರನ್ನೂ ಒಟ್ಟುಗೂಡಿಸಿದ್ದೀರಿ. ನೀವು ಯಶಸ್ವಿಯಾಗಿದ್ದೀರಿ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ವಿಜ್ಞಾನಿಗಳನ್ನು ಹೊಗಳಿದ್ದಾರೆ.

'ಚಂದ್ರಯಾನ-2 ಯೋಜನೆಯಲ್ಲಿ ಅದ್ಭುತ ಕಾರ್ಯ ಮಾಡಿದ ಇಸ್ರೋ ತಂಡಕ್ಕೆ ಅಭಿನಂದನೆಗಳು. ನಿಮ್ಮ ಕೆಲಸ ವ್ಯರ್ಥವಾಗಿಲ್ಲ. ಇನ್ನಷ್ಟು ಬಾಹ್ಯಾಕಾಶ ಯೋಜನೆಗಳಿಗೆ ಇದು ಅಡಿಗಲ್ಲಾಗಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

'ನಮ್ಮ ವಿಜ್ಞಾನಿಗಳ ಬಗ್ಗೆ ಹೆಮ್ಮೆಯಿದೆ. ಉತ್ತಮ ಕೆಲಸ ಮಾಡಿ, ಇತಿಹಾಸ ಸೃಷ್ಟಿಸಿದ್ದಾರೆ. ಜೈ ಹಿಂದ್' ಎಂದು ಇಸ್ರೋ ವಿಜ್ಞಾನಿಗಳನ್ನು ಹೊಗಳಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Last Updated : Sep 7, 2019, 6:31 AM IST

ABOUT THE AUTHOR

...view details