ಬೆಂಗಳೂರು:ಸುದೀರ್ಘ ಪ್ರಯಾಣದ ಬಳಿಕ ಚಂದ್ರಯಾನದ ಲ್ಯಾಂಡರ್ ಚಂದಿರನ ಮೇಲ್ಮೈ ತಲುಪುವ ಕೊನೆಯ ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿದೆ. ಈ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಭಾರಿ ನಿರಾಸೆಯಾಗಿದ್ದು ನಿಜ. ಇಸ್ರೋ ಅಧ್ಯಕ್ಷ ಕೆ. ಶಿವನ್ ದುಃಖಿತರಾಗಿ ಕಣ್ಣೀರಿಟ್ಟಿದ್ದು, ಈ ವೇಳೆ ಪ್ರಧಾನಿ ಮೋದಿ ಅವರನ್ನು ತಬ್ಬಿಕೊಂಡು ಸಂತೈಸಿದ ಘಟನಾವಳಿಗಳು ಇವತ್ತು ನಡೆದವು. ಇಂಥ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ/ ಬಾಹ್ಯಾಕಾಶ ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಹೇಳಿದ ಅತ್ಯಂತ ಕುತೂಹಲಕಾರಿ ಸ್ಟೋರಿ ನೆನಪಾಗುತ್ತಿದೆ.
ಸೋತಾಗ ಕಲಾಂ ಅವರಿಗೆ ಸತೀಶ್ ಧವನ್ ಧೈರ್ಯ ತುಂಬಿದ ರೀತಿ ಹೇಗಿತ್ತು?
ಹೋಮಿ ಬಾಬಾ ಮತ್ತು ವಿಕ್ರಂ ಸಾರಾಭಾಯಿ ಅವರ ಸಾಹಸದ ಫಲವಾಗಿ ದೇಶೀಯ ತಂತ್ರಜ್ಞಾನದಡಿ ಅಭಿವೃದ್ಧಿಪಡಿಸಲಾದ ಎಸ್‌ಎಲ್‌ವಿ-3 (ಉಪಗ್ರಹ ಉಡ್ಡಯನ ವಾಹನ) 1979ರಲ್ಲಿ ಉಡ್ಡಯನಕ್ಕೆ ಸಜ್ಜಾಗಿತ್ತು. ಈ ವೇಳೆ ಸತೀಶ್ ಧವನ್ ಇಸ್ರೋದ ಅಧ್ಯಕ್ಷರಾಗಿದ್ದರು. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದಎಸ್ಎಲ್ವಿ-3 ಪ್ರಥಮ ಉಡಾವಣೆ ಯಶಸ್ವಿಯಾಗದೆ ಮುಗ್ಗರಿಸಿ ಬಿತ್ತು. ಈ ಯೋಜನೆಯಲ್ಲಿ ಡಾ. ಕಲಾಂ ಮಿಷನ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಸೋಲಿನ ಹೊಣೆ ಹೊತ್ತು ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕಿತ್ತು. ಆದ್ರೆ, ಮಹತ್ವಾಕಾಂಕ್ಷೆಯ ಉಪಗ್ರಹ ಉಡ್ಡಯನ ವಾಹನದ ಕನಸು ಕಣ್ಣೆದುರೇ ಕಮರಿದಾಗ ಕಲಾಂ ತಳಮಳಕ್ಕೊಳಗಾಗಿದ್ದರು. ಇದನ್ನರಿತ ಡಾ. ಸತೀಶ್ ಧವನ್ ತಾವೇ ಪತ್ರಿಕಾಗೋಷ್ಟಿ ನಡೆಸಲು ಮುಂದಾದ್ರು. ಈ ಮೂಲಕ ಕಲಾಂ ಅವರಿಗೆ ಧೈರ್ಯ ತುಂಬಿದ್ರು. ಆತ್ಮವಿಶ್ವಾಸ ಹೆಚ್ಚಿಸಿದ್ರು.
ಆದ್ರೆ, ಇದಾಗಿ 2ನೇ ವರ್ಷದಲ್ಲಿ ಮತ್ತೆ ಎಸ್‌ಎಲ್‌ವಿ-3 ಪರೀಕ್ಷಾರ್ಥ ಉಡ್ಡಯನ ನಡೆಯಲಾಯ್ತು. ಈ ವೇಳೆ ಉಡ್ಡಯನ ಯಶಸ್ವಿಯಾಯ್ತು. ಅಬ್ದುಲ್ ಕಲಾಂ ಕಣ್ಣಲ್ಲಿ ಆನಂದ ಭಾಷ್ಪವಿತ್ತು. ಈ ವೇಳೆ, ಸ್ವತ: ಕಲಾಂ ಅವರು ಸತೀಶ್ ಧವನ್ ಅವರೇ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಬೇಕು ಎಂದಾಗ, ಸತೀಶ್ ಧವನ್ ಮುಂದಾಗೋದಿಲ್ಲ. ಕಲಾಂ, ಈಗ ನಿಮ್ಮ ಸರದಿ ಎಂದು ಯುವ ವಿಜ್ಞಾನಿಗೆ ಪತ್ರಿಕಾಗೋಷ್ಟಿ ಕಡೆಗೆ ದಾರಿ ತೋರಿದ್ರು.