ನವದೆಹಲಿ:ಚಂದ್ರನ ದಕ್ಷಿಣ ಧೃವ ತಲುಪುವ ಭಾರತದ ಚಂದ್ರಯಾನ- 2 ಯೋಜನೆ ಜಾಗತಿಕ ಸಮುದಾಯದ ಗಮನಸೆಳೆದಿತ್ತು. ಇಸ್ರೋದ ವಿಕ್ರಮ್ ಲ್ಯಾಂಡರ್ ನಿಗದಿತ ಸಾಫ್ಟ್ ಲ್ಯಾಂಡಿಂಗ್ನ ಕೆಲವು ನಿಮಿಷಗಳ ಮೊದಲು ಸಂವಹನ ಕಳೆದುಕೊಂಡು ನಾಪತ್ತೆಯಾಗಿದೆ. ಈ ಬಗ್ಗೆ ಜಾಗತಿಕ ಮಾಧ್ಯಮಗಳು 'ಭಾರತ ಈ ಮಿಷನ್ನಲ್ಲಿ ಸೋತಿಲ್ಲ. ಆದರೆ, ಅದರ ಗೆಲವು ಸ್ವಲ್ಪ ತಡವಾಗಲಿದೆ' ಎಂಬ ದಾಟಿಯಲ್ಲಿ ಮಿಶ್ರವಾಗಿ ಪ್ರತಿಕ್ರಿಯಿಸಿ ವರದಿ ಮಾಡಿವೆ.
ಚಂದ್ರಯಾನ- 2ರ ಲ್ಯಾಂಡರ್ ಅದರ ನಿರೀಕ್ಷಿತ ಪಥದಿಂದ ಮಾರ್ಗಬದಲಾಯಿಸಿದೆ. ವಿಕ್ರಮ್ ಲ್ಯಾಂಡರ್ ಮತ್ತು ಚಂದ್ರನ ಮೇಲ್ಮೈಗೆ ಸಾಗಿಸುತ್ತಿದ್ದ ಪ್ರಜ್ಞಾನ್ ರೋವರ್ ನಷ್ಟವು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೊಡೆತವಾಗಿದೆ ಹೊರತೂ ಮಿಷನ್ಗಾಗಿ ಅದು ಎಲ್ಲವನ್ನು ಕಳೆದುಕೊಂಡಿಲ್ಲ' ಎಂದು ಅಮೆರಿಕದ ಆನ್ಲೈನ ನಿಯತಕಾಲಿಕೆ 'ವೈರ್ಡ್' ವ್ಯಾಖ್ಯಾನಿಸಿದೆ.
'ಭಾರತದ ಎಂಜಿನಿಯರಿಂಗ್ (ತಾಂತ್ರಿಕತೆಯ) ಪರಾಕ್ರಮ ಮತ್ತು ದಶಕಗಳ ಬಾಹ್ಯಾಕಾಶ ಅಭಿವೃದ್ಧಿಯು ಜಾಗತಿಕ ಮಹತ್ವಾಕಾಂಕ್ಷೆಗಳೊಂದಿಗೆ ಸೇರಿಕೊಂಡಿದೆ' ಎಂದು 'ನ್ಯೂಯಾರ್ಕ್ ಟೈಮ್ಸ್' ಶ್ಲಾಘಿಸಿದೆ. ಚಂದ್ರಯಾನ- 2ರ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯದಿರುವುದನ್ನು "ಭಾಗಶಃ ವೈಫಲ್ಯ" ಎಂದು ಉಲ್ಲೇಖಿಸಿದ ಅದು, "ಒಂದು ಕಕ್ಷೆಯು ಕಾರ್ಯಾಚರಣೆಯಲ್ಲಿ ಉಳಿದಿದೆ. ಗಣ್ಯ ರಾಷ್ಟ್ರಗಳ ಕ್ಲಬ್‌ಗೆ ಸೇರುವ ಆ ದೇಶದ ಪ್ರಯತ್ನ ವಿಳಂಬವಾಗಿದೆ. ಆದರೂ, ಚಂದ್ರನ ಮೇಲ್ಮೈಯಲ್ಲಿ ಒಂದು ಭಾಗ ಇಳಿದಿದೆ" ಎಂದಿದೆ.