ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ ಮುಂದುವರೆದಿದ್ದು, ಶಹೀನಾ ಬಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಭಾಗವಹಿಸಿದ್ದರು.
ಸಿಎಎ ವಾಪಸ್ ಪಡೆಯುವ ಕಾಲ ಬಂದೇ ಬರುತ್ತೆ: ಭೀಮ್ ಆರ್ಮಿ ಮುಖ್ಯಸ್ಥ
ಪ್ರಧಾನಿ ಮೋದಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಾಪಸ್ ಪಡೆಯುವ ಕಾಲ ಬಂದೇ ಬರುತ್ತದೆ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಕ್ಷಿಣ ದೆಹಲಿಯ ಶಹೀನಾ ಬಾಗ್ನಲ್ಲಿ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ಚಂದ್ರಶೇಖರ್ ಆಜಾದ್, ಜನರ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ದಬ್ಬಾಳಿಕೆ ಮತ್ತು ಹಿಂಸಾತ್ಮಕ ದಾರಿ ಹಿಡಿದಿದೆ. ಸಂವಿಧಾನದ ರಕ್ಷಣೆಗಾಗಿ ದೇಶದ ಮಹಿಳೆಯರಿಂದ ಪ್ರಾರಂಭವಾದ ಈ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ.
ಅಸಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಪ್ರಧಾನಿ ನರೇಂದ್ರ ಮೋದಿ ಹಿಂಪಡೆಯಬೇಕು. ಸಂವಿಧಾನವನ್ನ ಎತ್ತಿ ಹಿಡಿಯಲು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಶಹೀನಾ ಬಾಗ್ ಪ್ರಾರಂಭಿಸಿದ ಈ ಯುದ್ಧ, ಇದೀಗ ಇಡೀ ದೇಶವನ್ನ ವ್ಯಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಈ ಕಾನೂನನ್ನ ಅವರೇ ಹಿಂಪಡೆಯುವ ಕಾಲ ಬಂದೇ ಬರುತ್ತದೆ ಎಂದಿದ್ದಾರೆ.