ಬುಲಂದ್‌ಶಹರ್(ಉತ್ತರ ಪ್ರದೇಶ):ತನ್ನ ಬೆಂಗಾವಲು ಪಡೆ ಮೇಲೆ ಗುಂಡು ಹಾರಿಸಲಾಗಿದೆ ಎಂದು ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.
ಆದರೆ ಈ ಘಟನೆ ಇನ್ನೂ ದೃಢಪಟ್ಟಿಲ್ಲ. ಒಂದು ಸುದ್ದಿ ಮಾಧ್ಯಮ ಮಾತ್ರ ದಾಳಿಯ ಬಗ್ಗೆ ವರದಿ ಮಾಡುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.
ಆಜಾದ್ ಸಮಾಜ ಪಕ್ಷವು ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಬೇರೆ ಪಕ್ಷದವರು ಆತಂಕಕ್ಕೊಳಗಾಗಿದ್ದಾರೆ ಎಂದು ಚಂದ್ರಶೇಖರ್ ಆಜಾದ್ ಟ್ವೀಟ್ ಮಾಡಿದ್ದಾರೆ.
"ಇಂದಿನ ಸಮಾವೇಶ ಅವರನ್ನು ಚಿಂತೆಗೀಡು ಮಾಡಿದೆ. ಈ ಕಾರಣಕ್ಕಾಗಿಯೇ ನನ್ನ ಬೆಂಗಾವಲಿನ ಮೇಲೆ ಹೇಡಿತನದಿಂದ ಗುಂಡು ಹಾರಿಸಲಾಯಿತು. ಇದು ಮತಗಳ ನಷ್ಟದ ಬಗ್ಗೆ ಅವರ ನಿರಾಶೆಯನ್ನು ತೋರಿಸುತ್ತದೆ ಮತ್ತು ವಾತಾವರಣವನ್ನು ಹದಗೆಡಿಸಬೇಕೆಂದು ಅವರು ಬಯಸುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.