ಗುರು ಅಂದ್ರೇ ಆದರ್ಶ-ಸಿದ್ಧಾಂತ, ಮಣ್ಣು-ಮಸಿ ಅಂತೆಲ್ಲಾ ಬುರುಡೆ ಬಿಡೋದಲ್ಲ. ಆ ಸ್ಥಾನ ಹೇಗಿರ್ಬೇಕು ಅಂತಾ ತೋರಿಸಿಕೊಟ್ಟ 'ಮಹಾಗುರು' ಇವರು. ಬದುಕಿದ್ರೇ ಹೀಗೇ ಬದುಕ್ಬೇಕು ಅಂತಾ ಎಲ್ರೂ ಅಭಿಮಾನದಿಂದ ಹೇಳುವ, ಅತ್ಯಂತ ಗೌರವದಿಂದ ಬದುಕಿದ ಗುರುವಿನ ಸ್ಟೋರಿ ಇದು. ಇದು ಶಿಕ್ಷಕರ ದಿನದ ಸ್ಪೆಷಲ್.
ಇವರು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ ವಿದ್ಯಾರ್ಥಿಗಳ ಮನದಾಳದ ಚಕ್ರವರ್ತಿಯಾಗಿದ್ದ ಶ್ರೀಧರ್ ಸರ್!
ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ, ಗುರು ದ್ರೋಣೋಚಾರ್ಯ.. ಹೀಗೆ ಕಣ್ಮುಂದೆ ಒಂದಿಷ್ಟು ಮಹಾನ್ ಗುರುಗಳು ಕಣ್ಮುಂದೆ ಬರ್ತಾರೆ. ಅವರ ಹಾದಿಯಲ್ಲೇ ಬದುಕಿದ ಒಬ್ಬ ಶಿಕ್ಷಕರಿದಾರೆ. ಅವ್ರೇ ಚಕ್ರವರ್ತಿ ಶ್ರೀಧರ್ ಸರ್.. ಇವರು ವಿದ್ಯಾರ್ಥಿಗಳ ಮನದಾಳದ ಚಕ್ರವರ್ತಿ. The Best Teachers Teach From The Heart, Not From The Book.. ಇದಕ್ಕೆ ಅನ್ವರ್ಥ ಇದೇ ಚಕ್ರವರ್ತಿ ಶ್ರೀಧರ್ ಸರ್. ಒಂದಿಡೀ ಜೀವನ ವಿದ್ಯಾರ್ಥಿಗಳಿಗಾಗಿ ಮುಡಿಪಿಟ್ಟ ಕರುಣಾಳು. ನಿಸ್ವಾರ್ಥದಿಂದ ನಿರಂತರ ಜ್ಞಾನಯಜ್ಞ ನಡೆಸಿ, ಅದರ ಫಲವನ್ನೆಲ್ಲ ವಿದ್ಯಾರ್ಥಿಗಳಿಗೇ ಹಂಚಿದ ಮಹಾನ್ ಯೋಗಿ. ಹೆಗಲಿಗೊಂದು ಚೀಲ, ಅದರ ತುಂಬ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ-ಉತ್ತರಗಳು. ದೊಗಳೆ ಪ್ಯಾಂಟ್, ಕಾಲಿಗೆ ಸಾಧಾರಣ ಚಪ್ಪಲಿ, ಆಡಂಬರವಿರದ ಜೀವವಿದು. ಹುಬ್ಬಳ್ಳಿಯ ಜ್ಯೂನಿಯರ್ ಟೆಕ್ನಿಕಲ್ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ಇವರ ಪಾಠ ಕೇಳೋದೇ ಭಾಗ್ಯ. ಬಿಡನಾಳದಲ್ಲಿ ರಾಚೋಟೆಪ್ಪ ಕುಬಸದ ಅನ್ನೋ ಪುಸ್ತಕ ವ್ಯಾಪಾರಿಯ ರೂಮ್ ಬಾಡಿಗೆ ಪಡೆದಿದ್ರು. ಚಾಪೆ-ಹೊದಿಕೆ, ಬೀಗದ ಹಾಕದ ಸೂಟ್‌ಕೇಸ್, ನಾಲ್ಕು ಜತೆ ಬಟ್ಟೆ, ಒಂದಷ್ಟು ಪುಸ್ತಕ, ಗೋಡೆ ಮೇಲೆ ದೇವರ ಪಟ ಇವರ ಆಸ್ತಿಯಾಗಿದ್ವು. ಚಳಿಯಲ್ಲೂ ತಣ್ಣೀರ ಸ್ನಾನ, ಮೈಗೆ ಯಾವತ್ತೂ ಸೋಪ್ ಹಚ್ಚುತ್ತಿರಲಿಲ್ಲ. ಬೆಳಗ್ಗಿನ ಉಪಹಾರ 2, ಮಧ್ಯಾಹ್ನ 2 ಹಾಗೂ ರಾತ್ರಿ ಊಟಕ್ಕೆ 2 ಇಡ್ಲಿ ಅಂದ್ರೇ ಒಂದು ದಿನಕ್ಕೆ 3 ಪ್ಲೇಟ್ ಇಡ್ಲಿ ಇವರ ಆಹಾರ. ಬಿಡನಾಳದಿಂದ 7 ಕಿ.ಮೀ ಪ್ರತಿ ದಿನ ನಡೆದೇ ಹೋಗ್ತಾಯಿದ್ರು. ಸಂಜೆ ಶಾಲೆ ಬಿಟ್ಮೇಲೆ ದುರ್ಗದ ಬೈಲ್‌ನ ಸಮಾಜ ಪುಸ್ತಕಾಲಯದಲ್ಲಿ ಒಂದಿಷ್ಟು ಸಾಹಿತ್ಯಿಕ ಚರ್ಚೆ, ಅಲ್ಲೇ ಒಂದ್ ಕಪ್ ಚಹಾ ಹೀರಿ ರೂಮ್ ಕಡೆ ನಡೆದೇ ಹೋಗ್ತಿದ್ದ ಸರಳಾತೀತ ಸರಳ ಶಿಕ್ಷಕ.
ಭಾನುವಾರ ವಿದ್ಯಾರ್ಥಿಗಳ ಮನೆಗೇ ಹೋಗಿ ಪಾಠ ಮಾಡ್ತಿದ್ದ ಮೇಷ್ಟ್ರು ಭಾನುವಾರ ವಿದ್ಯಾರ್ಥಿಗಳ ಮನೆಗೇ ಹೋಗಿ ಪಾಠ ಮಾಡ್ತಿದ್ದ ಮೇಷ್ಟ್ರು!
ಹಾಸ್ಯಮಿಶ್ರಿತ ಶೈಲಿಯಲ್ಲಿ ಪಾಠ ಹೇಳ್ತಿದ್ದ ರೀತಿ, ಕಬ್ಬಿಣದ ಕಡಲೆ ವಿಜ್ಞಾನ-ಗಣಿತ ಸರಳವಾಗಿ ತಿಳಿಯುವಂತೆ ಮಾಡ್ತಾಯಿತ್ತು. ಭಾನುವಾರ ರಜೆ-ಮಜಾ ಅಂತಾ ಅಂದ್ಕೊಳ್ಳಲೇ ಇಲ್ಲ. ಭಾನುವಾರವೂ ವಿದ್ಯಾರ್ಥಿಗಳೇ ಇವರ ಜೀವನ. ಮನೆಗೇ ಬಂದು ಪಾಠ ಹೇಳುವ ಗುರು ಇರ್ತಾರಾ. ಅದನ್ನೂ ಅವರು ಮಾಡಿದ್ರು. ಬೇರೆ ಶಾಲೆಗೆ ವರ್ಗವಾಗಿದ್ರೂ ಪ್ರಶ್ನೆಗಳು ಕಳುಹಿಸಿದ್ರೇ, ಅದಕ್ಕೆ ಪತ್ರಗಳಲ್ಲೇ ಉತ್ತರ ಬರೆಯುತ್ತಿದ್ದ ಮಹಾಗುರು ಇವ್ರು. ವಿದ್ಯಾರ್ಥಿಗಳು ಕುಗ್ಗಿದಾಗ ಹೇಳ್ತಿದ್ದ ಧೈರ್ಯ, ತುಂಬುವ ಸ್ಫೂರ್ತಿ, ಸಾಂತ್ವನ, ಹಿಗ್ಗಿದಾಗ ಹುರಿದುಂಬಿಸುವ ರೀತಿ, ಅತಿ ಆಶ್ಮವಿಶ್ವಾಸಕ್ಕೆ ಏರದಂತೆ ವಹಿಸುವ ಜಾಗೃತೆ ಇಂದಿಗೂ ಆ ಎಲ್ಲ ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಮಾಡೋಕೆ ಮನೋಸ್ಥೈರ್ಯ ನೀಡ್ತಿದೆ. ಇವರ ಮಮತೆಗೆ ಶಬ್ಧಗಳೇ ಇಲ್ಲ. ನಭೂತೋ ನಭವಿಷ್ಯತಿ ಎಂಬಂತೆ ಮಹಾಮೇರುವಿನೋಪಾದಿಯಲ್ಲಿರೋ ಇವರ ಗುಣಗಳಲ್ಲಿ ಕೆಲವನ್ನಾದ್ರೂ ಬದುಕಿನಲ್ಲಿ ಅಳವಡಿಸಿದ್ರೇ ಸಾರ್ಥಕ.
ಅಂತರಕ್ಕಷ್ಟೇ ಈ ವಿದಾಯ... ಮನಸ್ಸಿನಿಂದಲ್ಲ ಲೆಕ್ಕ ಬಿಡಿಸಿಡಿದ ವಿದ್ಯಾರ್ಥಿಗಳಿಗೆ ಪುಸ್ತಕ, ನಗದು ರೂಪದ ಬಹುಮಾನ ಲೆಕ್ಕ ಬಿಡಿಸಿಡಿದ ವಿದ್ಯಾರ್ಥಿಗಳಿಗೆ ಪುಸ್ತಕ, ನಗದು ರೂಪದ ಬಹುಮಾನ!
ಆಯ್ದ ಲೆಕ್ಕಗಳನ್ನ ಬಿಡಿಸಿದವರಿಗೆ ಬಹುಮಾನದ ರೂಪದಲ್ಲಿ ನಗದು- ಪುಸ್ತಕ ನೀಡ್ತಾಯಿದ್ರು. ಪ್ರಶಸ್ತಿ ಸೆಳೆತಕ್ಕೆ ಮಕ್ಕಳು ಗಣಿತದಲ್ಲಿ ಶೇ. 90ರಷ್ಟು ಅಂಕ ಗಳಿಸುತ್ತಿದ್ರು. ಅತ್ಯಂತ ಕಡಿಮೆ ಸಂಬಳ, ಸೌಲಭ್ಯಗಳನ್ನ ಹೊಂದಿರುವ ಗೃಹ ರಕ್ಷಕ ದಳಕ್ಕೂ ಧನ ಸಹಾಯ ಮಾಡಿದಾರೆ. ಪ್ರತಿ ವಾರ ವಿದ್ಯಾರ್ಥಿಗಳನ್ನ ಗುಂಪಾಗಿ ವಿಂಗಡಿಸಿ ರಸಪ್ರಶ್ನೆ ಸ್ಪರ್ಧೆಗಳನ್ನೂ ನಡೆಸ್ತಿದ್ರು. ಇದೆಲ್ಲಕ್ಕಿಂತಲೂ ಇವರ ಮೇರು ವ್ಯಕ್ತಿತ್ವ ಈಗಲೂ ಎಲ್ಲರನ್ನೂ ಚಕಿತಗೊಳಿಸುತ್ತೆ. ಭದ್ರಾವತಿ, ಮಂಗಳೂರು, ಬಳ್ಳಾರಿ ಹಾಗೂ ಹುಬ್ಬಳ್ಳಿಯ ಕಿರಿಯ ತಾಂತ್ರಿಕ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಚಕ್ರವರ್ತಿ ಇವರು, 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ತಮ್ಮ ವೇತನದಿಂದಲೇ ಓದಿಸಿದಾರಂದ್ರೇ ನಂಬ್ತೀರಾ.. ನಂಬಲೇಬೇಕು. ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಹೈಸ್ಕೂಲ್‌ನಿಂದ ಎಂಜಿನಿಯರಿಂಗ್‌ವರೆಗೂ 450ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಓದಿಸಿದಾರೆ. ಅವರೀಗ ಎಂಜಿನಿಯರ್‌ಗಳಾಗಿ ಬದುಕು ಕಟ್ಕೊಂಡಿದಾರೆ. ಹಾಗೇ 15ಕ್ಕೂ ಹೆಚ್ಚು ಎಂಬಿಬಿಎಸ್, ಶಿಕ್ಷಕರು, ಲಾಯರ್, ಪ್ರೊಫೆಸರ್, ಉದ್ಯಮಿಗಳು ಜತೆಗೆ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಅಧಿಕಾರಿಗಳಾಗಿದಾರೆ. ಇವರಿಂದ ನೆರವು ಪಡೆದ ವಿದ್ಯಾರ್ಥಿಗಳು ಡಾಕ್ಟರ್, ಎಂಜಿನಿಯರ್ ಜತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದು ದೇಶ-ವಿದೇಶಗಳಲ್ಲಿದಾರೆ. ವಿಶೇಷ ಅಂದ್ರೇ ತಮ್ಮ ಸೇವಾವಧಿಯ ಹೆಚ್ಚಿನ ಬರೋಬ್ಬರಿ 22 ವರ್ಷಕ್ಕೂ ಮೇಲ್ಪಟ್ಟು ಹುಬ್ಬಳ್ಳಿಯಲ್ಲಿಯೇ ವಿದ್ಯಾರ್ಥಿಗಳನ್ನ ಬದುಕನ್ನ ಹಸನು ಮಾಡಿದ ಶೈಕ್ಷಣಿಕ ತಪಸ್ವಿ.
ಇವರು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ ಒಂಟಿ ಜೀವನ ನಡೆಸೋರು, ಬೇರೆಯವರಿಗಾಗೇ ಜೀವಿಸ್ತಾರೆ!
ಇವರ ನೆರವು ಪಡೆದ ವಿದ್ಯಾರ್ಥಿಯೊಬ್ಬ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರಾಗಿದ್ದು, 50 ಸಾವಿರ ರೂ. ಕೊಟ್ಟು ಅಲ್ಲಿಗೆ ಬರುವಂತೆ ಹೇಳಿದ್ರಂತೆ. ಆದರೆ, ಅಮೆರಿಕಾಗೆ ತೆರಳದೆ ಅದೇ ಹಣ ಬಡ ವಿದ್ಯಾರ್ಥಿಗಳಿಗೆ ನೀಡಿದ್ರು. ಮೈಸೂರು ಜಿಲ್ಲೆ ಟಿನರಸೀಪುರ ತಾಲೂಕಿನ ಸೋಸಲೆ ಶ್ರೀನಿವಾಸಾಚಾರ್- ಲಕ್ಷ್ಮಮ್ಮ ದಂಪತಿ ಮಗನಾಗಿ 14-10-1946ರಲ್ಲಿ ಹುಟ್ಟಿದ ಚಕ್ರವರ್ತಿಯವರ ಬಾಲ್ಯ ಸರಿಯಿರಲಿಲ್ಲ. ಆರು ಮಂದಿ ಗಂಡು ನಾಲ್ಕು ಹೆಣ್ಣು ಹೀಗೇ 10 ಮಕ್ಕಳು. ಶ್ರೀಧರ್ ಸರ್‌ಗೆ ಬಾಲ್ಯದಲ್ಲಿ ಅಸ್ತಮಾ. ಕೆಳ ಮಧ್ಯಮವರ್ಗದ ತುಂಬು ಕುಟುಂಬ. ವಿದ್ಯಾಭ್ಯಾಸಕ್ಕೂ ಮೊದ್ಲೇ ಅಪ್ಪನ ದೃಷ್ಟಿ ಕಡಿಮೆಯಾಗಿತ್ತು. ಬಡತನ ಶಾಪವಾಗದೇ ಇವರ ಬದುಕು ರೂಪಿಸಿತು. ವಿವೇಕಾನಂದರ He Alone Lives Who Lives For Others ಇದರಂತೆಯೇ ಬದುಕಿದ ಮೇಷ್ಟ್ರು. ಬಿಎಸ್ಸಿ-ಬಿಎಡ್ ಮಾಡಿ ಮುಂದೆ 1973ರಲ್ಲಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಗಣಿತ-ವಿಜ್ಞಾನ ಶಿಕ್ಷಕರಾದ್ರು. ಕಾಲೇಜು ದಿನಗಳಲ್ಲಿ ಪುಸ್ತಕ ಓದುವ ಹವ್ಯಾಸ. ತಾನೂ ಮೇಷ್ಟ್ರಾಗ್ತೀನಿ ಅಂತಾ ಹೇಳ್ತಿದ್ದಂತೆಯೇ ಸ್ವತಃ ಮೇಷ್ಟ್ರಾಗಿದ್ದ ತಂದೆ ಶ್ರೀನಿವಾಸಾಚಾರ್, ಯೋಚನೆ ಮಾಡಿ ನಿರ್ಧಾರ ತೆಗೆದುಕೋ, ತುಂಬಾ ಜವಾಬ್ದಾರಿ ಕೆಲಸ. ನೂರಾರು ಮಕ್ಕಳ ಭವಿಷ್ಯ ರೂಪಿಸಬೇಕು ನೀನು. ಹಾಗೇ ದುಡಿಮೆಯ ಶೇ. 10ರಷ್ಟನ್ನ ಬಡವರಿಗೆ ನೀಡು ಅಂತಾ ಹೇಳಿದ್ರಂತೆ. ಆದರೆ, ಇವರು ಶೇ. 90ರಷ್ಟನ್ನ ಬಡವರಿಗೇ ನೀಡಿ ಉಳಿದ ಶೇ.10ರಲ್ಲಿಯೇ ಈಗಲೂ ತಮ್ಮ ವೆಚ್ಚಕ್ಕಿರಿಸಿಕೊಳ್ತಿದಾರೆ. ಮದ್ವೆಯಾದ್ರೇ ಎಲ್ಲಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಆಗುತ್ತೋ ಇಲ್ವೋ ಅಂತಾ ಬ್ರಹ್ಮಚರ್ಯ ಪಾಲಿಸಲು ಶಪಥಗೈದರು.
ಮಕ್ಕಳಲ್ಲೇ ದೇವರ ಕಂಡ ದೇವತಾ ಮನುಷ್ಯ ತಮ್ಮ ವಿದ್ಯಾರ್ಥಿಗಳಂದ್ರೆ ಇವರಿಗೆ ಪಂಚಪ್ರಾಣ ಚಿನ್ನದ ಉಂಗುರ, ಸರ ಬೆಲೆ ಬಾಳುವ ಉಡುಗೊರೆ ವಿದ್ಯಾರ್ಥಿಗಳಿಗೆ ಹಂಚಿಕೆ!
37 ವರ್ಷದ ಸೇವೆ ಬಳಿಕ 2006 ಅಕ್ಟೋಬರ್ 31ರಂದು ಹುಬ್ಬಳ್ಳಿ ಸ್ಕೂಲ್‌ನಲ್ಲಿದ್ದಾಗಲೇ ನಿವೃತ್ತಿಯಾದ್ರು. ಖಾಸಗಿ ಹೋಟೆಲ್‌ನಲ್ಲಿ ನಡೆದಿದ್ದ ಆ ಸಮಾರಂಭ ಅದ್ವಿತೀಯ. ಈಗಲೂ ಅದನ್ನ ಸ್ಮರಿಸ್ತಾರೇ ಅವರ ವಿದ್ಯಾರ್ಥಿಗಳು. ತಾವು ಗಳಿಸಿದ ಹಣವನ್ನೆಲ್ಲ ಬಡ ವಿದ್ಯಾರ್ಥಿಗಳಿಗೆ ಸಮರ್ಪಿಸಿದ ಅಪರೂಪದ ಶಿಕ್ಷಕನ ಬೀಳ್ಕೊಡುಗೆ, ನಿವೃತ್ತ ಬದುಕಿಗೆ ಶುಭ ಹಾರೈಸುವ ಘಳಿಗಿಯದು. ಆದರೆ, ಇದರ ಮಧ್ಯೆಯೇ ನಿರ್ಲಪ್ತರಾಗಿ ಒಂದ್ಕಡೆ ಕುಳಿತಿದ್ರು ವಿದ್ಯಾರ್ಥಿಗಳ ಮನದಾಳದ ದೇವ್ರು. ಅವರಿಗೆ ಒಂದು ಸಾರ್ಥಕ ವೃತ್ತಿ ಜೀವನ ಕಳೆದ ತೃಪ್ತಿಯಿತ್ತು. ಪ್ರತಿ ತಿಂಗಳ 18 ಸಾವಿರ ರೂ. ಸಂಬಳದಲ್ಲಿ ತಮ್ಮ ವೆಚ್ಚಕ್ಕೆಂದು ಇವರು ತೆಗೆದಿರಿಸುತ್ತಿದ್ದ ಮೊತ್ತ ಬರೀ 1500 ರೂ. ಉಳಿದ ಹಣ ವಿದ್ಯಾರ್ಥಿಗಳಿಗೇ ಮೀಸಲು. ನಿವೃತ್ತಿಯಿಂದ ಬಂದ ಹಣ ಅರ್ಹ 44 ವಿದ್ಯಾರ್ಥಿಗಳಿಗೆ ಕೊಟ್ಟು ಬಿಟ್ರು. ನಿವೃತ್ತಿ ವೇಳೆ ಉಡುಗೊರೆಯಾಗಿ ಬಂದಿದ್ದ ಚಿನ್ನದ ಉಂಗುರ, ಮತ್ತಿತರ ಕಾಣಿಕೆಗಳನ್ನ ವಿದ್ಯಾರ್ಥಿಗಳೇ ಹಂಚಿದ್ರು. 1973ರಲ್ಲಿ ಮೈಸೂರಿನಿಂದ ಶಿಕ್ಷಕನಾಗಿ ಬರುವಾಗ ಬರೀ ಒಂದ್ ಸೂಟ್ ಕೇಸ್ ಕೈಯಲ್ಲಿತ್ತು. ಹುಬ್ಬಳ್ಳಿಯಿಂದ ಮೈಸೂರಿನ ಟ್ರೇನ್ ಹತ್ತಿದಾಗಲೂ ಒಂದು ಸೂಟ್ ಕೇಸ್ ಜೇಬಲ್ಲಿ ಬರೀ 500 ರೂ. ಜತೆಗೆ ವಿವೇಕಾನಂದರ ಮೂರ್ತಿ ಮಾತ್ರ ಇತ್ತಂತೆ. ಸಮಾಜ ಪುಸ್ತಕಾಲಯದ ರಘುನಂದನ್ ಗೋಡ್ಸೆ ಪ್ರೀತಿಯಿಂದ 2 ಜೊತೆ ಬಟ್ಟೆ ಹೊಲಿಸಿ ಕೊಟ್ಟಿದ್ರು.
500ಕ್ಕೂ ಹೆಚ್ಚು ಬಡ ಕುಟುಂಬಗಳ ಮನೆ ದೀಪ ಬೆಳಗಿಸಿದ ದೇವರು ಪಿಎಫ್‌ನಿಂದ ಬಂದ ಹಣವೆಲ್ಲ ವಿದ್ಯಾರ್ಥಿಗಳಿಗೇ ಮೀಸಲಿರಿಸಿದ್ದ ಶಿಕ್ಷಕರ!
ವೇತನ ಬರುವ ಮೊದಲೇ ಮುಂದಿನ ತಿಂಗಳು ಯಾವ್ಯಾವ ವಿದ್ಯಾರ್ಥಿಗಳಿಗೆ ತನ್ನ ಹಣದ ಅವಶ್ಯಕತೆಯಿದೆ ಅಂತಾ ತಿಳಿದು ಮೊದಲೇ ಅದಕ್ಕೆ ಹಣ ತೆಗೆದಿರಿಸುತ್ತಿದ್ರು. ಎಷ್ಟೋ ಸಾರಿ ಸಾಲ ಮಾಡಿಯಾದ್ರೂ ವಿದ್ಯಾರ್ಥಿಗಳಿಗೆ ದುಡ್ಡು ಹೊಂದಿಸ್ತಿದ್ರು. ಪ್ರತಿ ವರ್ಷ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚ ಭರಿಸ್ತಾಯಿದ್ರು. ಜಾತಿ ಅನ್ನೋ ಶಬ್ದವೇ ಇವರತ್ತ ಸುಳಿಯಲಿಲ್ಲ. ಒಂದ್ಸಾರಿ ಒಂದೇ ಸಲ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರಿಂದ ನೆರವು ಪಡೆದಿದ್ರು. ವಿದ್ಯಾರ್ಥಿಗಳ ಮೆಡಿಕಲ್, ಎಂಜಿನಿಯರಿಂಗ್ ಸೇರಿ ಮತ್ತಿತರ ಉನ್ನತ ವ್ಯಾಸಂಗಕ್ಕಾಗಿ ತಾವೇ ಮುಂದೆ ನಿಂತು ಪೋಷಕರಂತೆ ಅಡ್ಮಿಷನ್ ಮಾಡಿಸ್ತಾಯಿದ್ರು ಈ ನಿಸ್ವಾರ್ಥಿ. ಸಹಾಯ ಪಡೆಯೋ ಪ್ರತಿ ವಿದ್ಯಾರ್ಥಿಯ ಎಲ್ಲ ಸಂಗತಿಗಳೂ ಇವ್ರ ನಾಲಿಗೆ ತುದಿಯ ಮೇಲಿರ್ತಿದ್ವು. ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣ ಹೊಂದಿಸೋದಕ್ಕೆ ಆಗದಿದ್ದಾಗ ಹುಬ್ಬಳ್ಳಿಯ ಸಮಾಜ ಪುಸ್ತಕಾಲಯದ ರಘುನಂದನ್ ಗೋಡ್ಸೆಯವರ ಬಳಿ ಸಾಲ ಪಡೆದು, ಬಳಿಕ ತೀರಿಸ್ತಾಯಿದ್ರಂತೆ ಶ್ರೀಧರ್ ಚಕ್ರವರ್ತಿ. ವರ್ಷಕ್ಕೆ 2 ಸಾವಿರ ಕೋಟಿ ವ್ಯವಹಾರ ಮಾಡುವ ಕ್ವೆಸ್ಟ್ ಗ್ಲೋಬಲ್ ಸಂಸ್ಥಾಪಕ ಅಧ್ಯಕ್ಷ ಅಜೀತ್ ಪ್ರಭು ಇವರ ಪ್ರೀತಿಯ ಶಿಷ್ಯ. ನಿವೃತ್ತಿ ವೇಳೆ ಮೇಲೆಯೇ ಅದೇ ಶಿಷ್ಯ ಈ ಶಿಕ್ಷಕನ ಕಾಲಿಗೆರಗಿದ್ರು. 2006ರಲ್ಲಿ ಜನ್ಮತಾಳಿದ್ದೇ ಮಹಾಗುರು ಎಜ್ಯುಕೇಷನ್ ಟ್ರಸ್ಟ್. ಅವತ್ತೇ ತಮ್ಮ ಪಿಎಫ್ ಹಣದ ಮೇಲೆ ಸಾಕಷ್ಟು ಸಾಲ ಮಾಡ್ಬಿಟ್ಟಿದ್ರು. ಪಿಎಫ್ ಹಣವನ್ನ ಆರಂಭಿಕವಾಗಿ 2 ಲಕ್ಷ ರೂಪಾಯಿಯನ್ನ ಟ್ರಸ್ಟ್‌ಗೆ ನೀಡಿದ್ರು. ಅದೇ ಹಣದಲ್ಲಿ ಐವರು ವಿದ್ಯಾರ್ಥಿಗಲಿಗೆ ಕಂಪ್ಯೂಟರ್ ಕೊಡಿಸಲಾಗಿತ್ತು.
ಇವರ ತರಗತಿಗಳನ್ನು ಮಿಸ್ ಮಾಡಲ್ಲ ವಿದ್ಯಾರ್ಥಿಗಳು 2006ರಲ್ಲಿ ಆರಂಭಿಸಿದ ಮಹಾಗುರು ಟ್ರಸ್ಟ್‌ನಿಂದ ಪ್ರತಿಭಾವಂತರಿಗೆ ನೆರವು!
ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಾರಿದೀಪವಾಗ್ತಿದೆ ಶ್ರೀಧರ್ ಸರ್ ಪ್ರೇರಣೆಯಿಂದ ಆರಂಭವಾಗಿರುವ ಮಹಾಗುರು ಎಜ್ಯುಕೇಷನ್ ಟ್ರಸ್ಟ್. 14 ವರ್ಷದಿಂದ 60 ಲಕ್ಷಕ್ಕೂ ಅಧಿಕ ಹಣ ಅರ್ಹರಿಗೆ ಶಿಷ್ಯವೇತನ ನೀಡಿದೆ ಈ ಸಂಸ್ಥೆ. ಕಳೆದ ವರ್ಷ 10 ಲಕ್ಷ ಇದ್ರೇ ಈ ಸಾರಿ 10.5 ಲಕ್ಷದಷ್ಟು ಶಿಷ್ಯ ವೇತನ ಮೊತ್ತ ಹೆಚ್ಚಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಇದರ ಮೊತ್ತ ಹೆಚ್ಚಾಗುತ್ತಲೇ ಇದೆ. ಸಂಸ್ಥೆಯಿಂದ ಸಹಾಯ ಪಡೆದ ನೂರಾರು ವಿದ್ಯಾರ್ಥಿಗಳು ಈಗ ದೊಡ್ಡ ದೊಡ್ಡ ಕಂಪನಿಗಳ ಕೆಲಸ ಗಿಟ್ಟಿಸಿದಾರೆ. ಕಷ್ಟದಲ್ಲಿದ್ದವರನ್ನ ಗುರುತಿಸಿ ಹಣಕಾಸಿನ ನೆರವಿನ ಜತೆಗೆ ಅಗತ್ಯ ಮಾರ್ಗದರ್ಶನ-ಸಲಹೆ ಸೂಚನೆ ನೀಡ್ತಿದೆ ಮಹಾಗುರು ಟ್ರಸ್ಟ್. ದೇಶ-ವಿದೇಶಗಳಲ್ಲಿರೋ ಇವರ ಶಿಷ್ಯಂದಿರು ಈಗಲೂ ಟ್ರಸ್ಟ್‌ಗೆ ನೆರವು ನೀಡ್ತಿದಾರೆ.ಒಮ್ಮೆ ಒಬ್ಬ ವಿದ್ಯಾರ್ಥಿ ಆಯ್ಕೆಯಾದ್ರೇ ಆತನ ಉನ್ನತ ಶಿಕ್ಷಣ ಮುಗಿಯುವವರೆಗೂ ಆರ್ಥಿಕ ನೆರವು ದೊರೆಯುತ್ತೆ. ಈ ಟ್ರಸ್ಟ್ ಸಣ್ಣ ಕೈಗಾರಿಕೆ ಸ್ಥಾಪಿಸುವ ಕನಸು ಹೊಂದಿದೆ. ಸ್ವ ಉಗ್ಯೋಗ ನಡೆಸಲು ನೆರವು ನೀಡಲಿದೆ. ಹಳ್ಳಿಯಲ್ಲಿ ಔಷಧೋಪಚಾರ ಹಾಗೂ ಶ್ರೀಧರ್ ಸರ್ ಹೆಸರಿನಲ್ಲಿಯೇ ಮಾದರಿ ಶಾಲೆ ಸ್ಥಾಪನೆ ಮಾಡುವ ಚಿಂತನೆಯಿದೆ. ಮೈಸೂರಿನ ಸರಸ್ವತಿಪುರಂನ ತಮ್ಮನ ಮನೆಯಲ್ಲಿ ಮೇಷ್ಟ್ರ ವಾಸ್ತವ್ಯ. ತಮ್ಮನ ಮೊಮ್ಮಕ್ಕಳ ಜತೆಗೇ ಕಾಲ ಕಳ್ಕೊಂಡಿದಾರೆ. ನಿವೃತ್ತಿಯಾಗುವವರೆಗೂ ರಾಜ್ಯಬಿಟ್ಟು ಹೊರಗೇ ಹೋಗಿರಲೇ ಇಲ್ಲ. ಆದರೆ, ಶಿಷ್ಯಂದಿರೇ ಸೇರಿ ಇವರನ್ನ ಆಲ್ ಇಂಡಿಯಾ ಟೂರ್ ಮಾಡಿಸಿದ್ರು. ಜೀವನದ ಸಾರ್ಥಕತೆ ಅಂದ್ರೇ ಇದೇ ಅನಿಸುತ್ತೆ. ಓದಲು ಈಗಲೂ ಉತ್ತಮ ಪುಸ್ತಕಗಳಿವೆ. ಈ ಜೀವನ ನಿರುಪಯೋಗಿ ಅಲ್ಲ, ಅನ್ನೋ ಧನ್ಯತಾ ಭಾವವಿದೆ.
ಶ್ರೀಧರ್ ಸರ್ ಅಂದ್ರೆ ವಿದ್ಯಾರ್ಥಿಗಳಿಗೆ ಹೆಮ್ಮೆ ಮಕ್ಕಳಲ್ಲೇ ದೇವರ ಕಂಡ ದೇವತಾ ಮನುಷ್ಯ 500ಕ್ಕೂ ಹೆಚ್ಚು ಬಡ ಕುಟುಂಬಗಳ ಮನೆ ದೀಪ ಬೆಳಗಿಸಿದ ದೇವರು!
ಇವರು ಯಾವತ್ತೂ ಸ್ವಂತಕ್ಕೆ ಮನೆ, ನಿವೇಶನ ಮಾಡ್ಕೊಳ್ಳಲೇ ಇಲ್ಲ. ಸರಳವಾಗಿ ಬದುಕಿರುವ ಪ್ರತಿ ನಡೆ-ನುಡಿಯೂ ವಿದ್ಯಾರ್ಥಿಗಳಿಗೆ ಮಾದರಿ. ತರಗತಿಯಲ್ಲಿ ವಿದ್ಯಾರ್ಥಿಗಳ ಅವರ ಮುಂದೆ ತಲೆಬಾಗಿ ನಿಂತ್ರೇ ಪ್ರೀತಿಯಿಂದಲೇ ಮಧ್ಯದ ಮೂರು ಕೈಬೆರಳುಗಳಿಂದ ತಲೆಮೇಲೆ ಹೊಡೆಯುತ್ತಿದ್ರು. ಅದು ಒಂದ್ರೀತಿ ಗುರುವಿನ ಆಶೀರ್ವಾದ ಮಾಡೋ ರೀತಿ. ಬರೀ ವಿಜ್ಞಾನ-ಗಣಿತನ್ನಷ್ಟೇ ಕಲಿಸಲಿಲ್ಲ, ಬದಲಾಗಿ ಬದುಕಿನ ಪಾಠ ಕಲಿಸಿದ್ರು. ವಿಷಯವನ್ನ ಸಾಧ್ಯವಾದಷ್ಟು ನೈಜ ಜೀವನದೊಂದಿಗೇ ಸಮೀಕರಿಸಿ ಬೋಧಿಸ್ತಿದ್ರು. ಸಣ್ಣದೊಂದು ಕೋಣೆಯಲ್ಲಿ ಸ್ಟೌವ್ ಇಟ್ಕೊಂಡು ಚಾಪೆ ಮೇಲೆ ಮಲಗ್ತಾನೇ ನೂರಾರು ವಿದ್ಯಾರ್ಥಿಗಳ, ಕುಟುಂಬಗಳ ಬದುಕು ರೂಪಿಸಿದ್ದು ಯಾವ ಮಹಾಪುರುಷರಿಗಿಂತಲೂ ಇವರ ಜೀವನ ಕಡಿಮೆಯಲ್ಲ. ಬ್ಯಾಂಕ್ ಬ್ಯಾಲೆನ್ಸ್, ಸೈಟು-ಮನೆ, ಓಡಾಡಲು ವಾಹನ ಆಪತ್ತಿಗಿರಲಿ ಅಂತಾ ಚಿನ್ನ-ಬೆಳ್ಳಿ ಏನಂದ್ರೇ ಏನೂ ಮಾಡ್ಕೊಂಡಿಲ್ಲ. 500ಕ್ಕೂ ಹೆಚ್ಚು ಕುಟುಂಬಗಳಲ್ಲಿ ಊಟಕ್ಕೂ ಮೊದಲೇ ಶ್ರೀಧರ್ ಸರ್‌ನ ನೆನಪಿಸಿಕೊಳ್ಳದೇ ಇದ್ರೇ ಆ ಜೀವಗಳಿಗೆ ನೆಮ್ಮದಿಯಿಲ್ಲ. 500ಕ್ಕೂ ಹೆಚ್ಚು ಕುಟುಂಬಗಳ ವಿದ್ಯಾರ್ಥಿಗಳು ಬಡತನದಲ್ಲಿ ಓದೋದಕ್ಕಾಗದಿದ್ರೇ ಈಗ ಎಂಥ ಸ್ಥಿತಿಯಲ್ಲಿರ್ತಾಯಿದ್ರೋ ಏನೋ.. ಶ್ರೀಧರ್ ಸರ್ ಅನ್ನೋ ನಂದಾದೀಪ ಅವರ ಬದುಕಿಗೆ ಬೆಳಕನ್ನ ಸೂಸಿದೆ. ಶ್ರೀಧರ್ ಸರ್ ನಿಜಕ್ಕೂ ಆರದ ನಂದಾದೀಪವೇ.. ಬರೀ ಹೇಳದೇ ಆದರ್ಶ ಬದುಕು ಬದುಕಿದ ಈ ಸಂತನಿಗೆ ನಿಜಕ್ಕೂ ಒಂದಲ್ಲ ಸಾವಿರ ಸಲಾಂ.