ನವದೆಹಲಿ:ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಕುರಿತು ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸುವ ಬಗ್ಗೆ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ವಿಮರ್ಶಾತ್ಮಕ ಹೇಳಿಕೆ ನೀಡಿದ್ದು, ಇಂತಹ ಮಾಧ್ಯಮ ವರದಿಗಳು ಸಂರ್ಪೂವಾಗಿ ನಿಷೇಧಿಸಲಾಗಿದೆ ಮತ್ತು ಇದು ನ್ಯಾಯಾಂಗದ ನಿಂದನೆಯಾಗಿದೆ ಎಂದಿದ್ದಾರೆ.
ಹೋರಾಟಗಾರ, ವಕೀಲ ಪ್ರಶಾಂತ್ ಭೂಷಣ್ ಮತ್ತು ಪತ್ರಕರ್ತ ತರುಣ್ ತೇಜ್ಪಾಲ್ ವಿರುದ್ಧ 2009 ರಲ್ಲಿ ದಾಖಲಾದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠದ ಮುಂದೆ ನಡೆಯಿತು. ಈ ವೇಳೆ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಈ ಮಾತನ್ನು ಹೇಳಿದರು.
2009 ರಲ್ಲಿ ಹಿರಿಯ ನ್ಯಾಯಮೂರ್ತಿ ಬಗ್ಗೆ ತೆಹಲ್ಕಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನ್ಯಾಯಾಂಗ ನಿಂದನೆ ಆಗಿದೆ ಎಂದು ಪ್ರಶಾಂತ್ ಭೂಷಣ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ತೇಜ್ಪಾಲ್ ತೆಹಲ್ಕಾದ ಸಂಪಾದಕರಾಗಿದ್ದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ವೇಣುಗೋಪಾಲ್, ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂದು ಮಾಧ್ಯಮಗಳು ಬಾಕಿ ಇರುವ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸುತ್ತಿವೆ ಮತ್ತು ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿವೆ. ದೊಡ್ಡ ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳು ವಿಚಾರಣೆಗೆ ಬರಲಿರುವಾಗ, ಟಿವಿ ವರದಿಗಳನ್ನು ಬಿತ್ತರಿಸಲಾಗುತ್ತಿದೆ. ಇದು ಜಾಮೀನು ಅರ್ಜಿ ಸಲ್ಲಿಸಿದ ಆರೋಪಿಗಳಿಗೆ ಸಮಸ್ಯೆಯನ್ನುಂಟು ಮಾಡಲಿದೆ ಎಂದರು.
ರಫೇಲ್ ಪ್ರಕರಣದಲ್ಲಿ ಮಾಧ್ಯಮ ವರದಿ ಮಾಡಿದ ಬಗ್ಗೆ ಉಲ್ಲೇಖಿಸಿದ ಅವರು, ಬಾಕಿ ಇರುವ ಪ್ರಕರಣಗಳ ಬಗ್ಗೆ ಇಂತಹ ವರದಿ ಮಾಡಬಾರದು ಎಂದರು. ಈ ವಿಷಯದ ಬಗ್ಗೆ ಹಿರಿಯ ವಕೀಲ ರಾಜೀವ್ ಧವನ್, ಭೂಷಣ್ ಅವರ ಸಲಹೆಗಾರ ಮತ್ತು ಪ್ರಕರಣದಲ್ಲಿ ಹಾಜರಾಗುವ ಇತರ ಎಲ್ಲಾ ವಕೀಲರೊಂದಿಗೆ ಚರ್ಚಿಸಲು ಬಯಸುತ್ತೇನೆ ಎಂದು ಹೇಳಿದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಬಿ .ಆರ್ ಗವಾಯಿ ಮತ್ತು ಕೃಷ್ಣ ಮುರಾರಿ, ವೇಣುಗೋಪಾಲ್ ಪೀಠದ ಮುಂದೆ ಸಲ್ಲಿಸಿರುವ ಹೇಳಿಕೆಗಳಲ್ಲಿ ತಿದ್ದುಪಡಿ ಮಾಡಿ ಮುಂದಿನ ವಿಚಾರಣೆ ವೇಳೆ ಸಲ್ಲಿಸಬಹುದು ಎಂದು ವಿಚಾರಣೆಯನ್ನು ನವೆಂಬರ್ 4 ಕ್ಕೆ ಮುಂದೂಡಿದರು.