ಚೆನ್ನೈ(ತಮಿಳುನಾಡು): ಅಪ್ಪ-ಮಗನ ಲಾಕಪ್ ಡೆತ್ ಪ್ರಕರಣವನ್ನು ತನಿಖೆ ನಡೆಸುವಂತೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ಟುಟಿಕೊರಿನ್ ಜಿಲ್ಲೆಯ ಸಾಥನ್ಕುಲಂ ಪೊಲೀಸ್ ಠಾಣೆಯಲ್ಲಿ ನಡೆದ ಅಪ್ಪ-ಮಗನ ಲಾಕಪ್ ಡೆತ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಹೀಗಾಗಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರ ಸಿಬಿಐಗೆ ಅಧಿಸೂಚನೆ ಹೊರಡಿಸಿದೆ.
ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನಿರ್ದೇಶನದಂತೆ ಪ್ರಸ್ತುತ ಸಿಬಿ-ಸಿಐಡಿ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಆರೋಪಿಗಳಾಗಿರುವ ಸಾಥನ್ಕುಲಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಈಗಾಗಲೇ ಬಂಧಿಸಲಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ಅಂಗಡಿ ತೆರೆದಿದ್ದರೂ ಎಂಬ ಕಾರಣಕ್ಕೆ ಪಿ. ಜಯರಾಜ್ ಮತ್ತು ಅವರ ಮಗ ಬೆನಿಕ್ಸ್ ಎಂಬುವರನ್ನು ಜೂನ್ 23 ರಂದು ಬಂಧಿಸಿ ಠಾಣೆಗೆ ಕರೆದೊಯ್ದ ಪೊಲೀಸರು ಎರಡು ದಿನಗಳ ಕಾಲ ಥಳಿಸಿ, ಚಿತ್ರಹಿಂಸೆ ನೀಡಿ ಸಾವಿಗೆ ಕಾರಣರಾಗಿದ್ದರು. ಈ ಪ್ರಕರಣ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ತಮಿಳುನಾಡಿನಲ್ಲಿ ಜನ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು ಹಾಗೂ ದೇಶದ ಪ್ರಮುಖ ವ್ಯಕ್ತಿಗಳು ಈ ಪ್ರಕರಣದ ವಿರುದ್ಧ ಧ್ವನಿಯೆತ್ತಿದ್ದರು.