ನವದೆಹಲಿ:ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ರದ್ದುಗೊಳಿಸಿದ ಬಳಿಕ ಒಂದೇ ರೂಪದ ಮತದಾರರ ಪಟ್ಟಿ ಸಿದ್ಧತೆಯ ಕಾರ್ಯ ಸಾಧ್ಯತೆಯತ್ತ ಮೋದಿ ಸರ್ಕಾರ ದೃಷ್ಟಿ ನೆಟ್ಟಿದೆ.
ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಏಕರೂಪತೆ ತರಲು ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಾಮಾನ್ಯ ಚುನಾವಣಾ ಪಟ್ಟಿ ಹೊಂದುವ ಸಾಧ್ಯತೆಯ ಬಗ್ಗೆ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ, ಚುನಾವಣಾ ಆಯೋಗವು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತದೆ.
ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಪ್ರತ್ಯೇಕ ಸಂಸ್ಥೆಗಳಾಗಿರುವ ರಾಜ್ಯ ಚುನಾವಣಾ ಆಯೋಗಗಳು ತಮ್ಮದೇ ಆದ ಮತದಾರರ ಪಟ್ಟಿಯನ್ನು ಆಧರಿಸಿ ಆಯಾ ರಾಜ್ಯಗಳಲ್ಲಿನ ಪುರಸಭೆ ಮತ್ತು ಪಂಚಾಯಿತಿಗಳಂಥ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತವೆ.
ಹಲವು ರಾಜ್ಯ ಚುನಾವಣಾ ಆಯೋಗಗಳು ತಮ್ಮದೇ ಆದ ಪಟ್ಟಿಗಳನ್ನು ರೂಪಿಸಲು ಚುನಾವಣೆ ಆಯೋಗದ (ಇಸಿ) ಕರಡು ಮತದಾರರ ಪಟ್ಟಿ ಬಳಸಿಕೊಳ್ಳುತ್ತವೆ. ಕರಡು ಇಸಿ ಪಟ್ಟಿಯನ್ನು ಬಹುತೇಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ.
ರಾಜ್ಯಗಳಿಗೆ ತಮ್ಮದೇ ಆದ ಮತದಾರರ ಪಟ್ಟಿಗಳು ಹೊಂದಲು ಅಥವಾ ವಿಧಾನಸಭಾ ಚುನಾವಣೆಗೆ ಇಸಿ ಸಿದ್ಧಪಡಿಸಿದ ಒಂದನ್ನು ಅಳವಡಿಸಿಕೊಳ್ಳಲು ಅಧಿಕಾರವಿದೆ.
ಈ ಮೂರು ವಿಧದ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ ಇರಬಹುದೇ ಎಂದು ಸರ್ಕಾರ ಚರ್ಚಿಸುತ್ತಿದೆ. ಈಗ, ಕೇಂದ್ರ ಚುನಾವಣಾ ಪಟ್ಟಿಯನ್ನು (ಇಸಿ ಸಿದ್ಧಪಡಿಸಿದ) ಅಳವಡಿಸಿಕೊಳ್ಳುವಂತೆ ರಾಜ್ಯಗಳನ್ನು ಮನವೊಲಿಸುವ ಕೆಲಸ ನಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
2019ರ 17ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯ 542 ಸ್ಥಾನಗಳಿಗೆ ಮತದಾನ ನಡೆದಿತ್ತು. ಈ ವೇಳೆ ದೇಶಾದ್ಯಂತ 911 ಮಿಲಿಯನ್ (91.1 ಕೋಟಿ) ಮತದಾರರು ಇರುವುದಾಗಿ ತಿಳಿದುಬಂತು. ಈ ಚುನಾವಣೆಯಲ್ಲಿ ಶೇ 67.11ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.